ನ್ಯೂಯಾರ್ಕ್: ಕಳೆದ ನವೆಂಬರ್‌ವರೆಗೆ ಭಾರತ ಮೂಲದ 66 ಉಗ್ರರು ವಿದೇಶದಲ್ಲಿ ಜಾಗತಿಕ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಜೊತೆ ಸಕ್ರಿಯರಾಗಿದ್ದಾರೆ ಎಂದು ಅಮೆರಿಕ ಹೇಳಿದೆ.
ಕಳೆದ ವರ್ಷ ಯಾವುದೇ ವಿದೇಶಿ ಭಯೋತ್ಪಾದಕರು ಭಾರತಕ್ಕೆ ವಾಪಸ್ ಹೋಗಿಲ್ಲ ಎಂದು ಅಮೆರಿಕದ ಭಯೋತ್ಪಾದನಾ ನಿಗ್ರಹ ದಳ ಇಲಾಖೆ ಭಯೋತ್ಪಾದನೆ ಕುರಿತ 2020ರ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
ಭಾರತದಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ ರಾಷ್ಟ್ರೀಯ ತನಿಖಾ ದಳ - ಎನ್‌ಐಎ ಐಸಿಸ್‌ಗೆ ಸಂಬಂಧಿಸಿದ 34 ಪ್ರಕರಣಗಳಲ್ಲಿ ತನಿಖೆ ನಡೆಸಿದೆ. ಈ ಸಂಬಂಧ 160 ಜನರನ್ನು ಬಂಧಿಸಿದೆ ಎಂದು ಹೇಳಿದೆ. ಐಸಿಸ್ ಸಿರಿಯಾದಲ್ಲಿ ತನ್ನ ಪ್ರದೇಶವನ್ನು ಕಳೆದುಕೊಂಡಿದ್ದರೂ 2019ರಲ್ಲಿ ಪಾಕಿಸ್ತಾನ ಮತ್ತು ಭಾರತದಲ್ಲಿ ಹೊಸ ಶಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತಲೇ ಇತ್ತು. ಇತರ ಐಎಸ್ - ಸಂಯೋಜಿತ ಗುಂಪುಗಳು 2020ರಲ್ಲಿ ಮಾಲ್ಡೀವ್ಸ್ ಮತ್ತು ಬಾಂಗ್ಲಾದೇಶದಲ್ಲಿ ನಡೆದ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿವೆ ಎಂದು ವರದಿ ಹೇಳಿದೆ.
ಐಎಸ್ ಭೌತಿಕವಾಗಿ ಕುಸಿದಿದೆ. ಆದರೆ, ಅಪಾಯಕಾರಿ ಶತ್ರುವಾಗಿ ಉಳಿದಿದೆ. ಇರಾಕ್, ಸಿರಿಯಾದ ಹೊರಗಿನ ಶಾಖೆಗಳು ಮತ್ತು ನೆಟ್‌ವರ್ಕ್‌ಗಳ ಮೇಲೆ ಐಎಸ್ ಹೆಚ್ಚಿನ ಗಮನಹರಿಸಿರುವುದು ಒಂದು ನಿರ್ದಿಷ್ಟ ಕಾಳಜಿಯಾಗಿದೆ ಎಂದು ಭಯೋತ್ಪಾದನೆ ನಿಗ್ರಹದ ಕಾರ್ಯನಿರ್ವಹಣೆಯ ಸಂಯೋಜಕ ಜಾನ್ ಗಾಡ್ಫ್ರೇ ಹೇಳಿದ್ದಾರೆ.
ಉಗ್ರರ ದಾಳಿಗಳ ಸಂಖ್ಯೆ ಹೆಚ್ಚಳ
ವರದಿಯ ಅಂಕಿ - ಅಂಶಗಳ ಮಾಹಿತಿ ಪ್ರಕಾರ, 2019ಕ್ಕೆ ಹೋಲಿಸಿದರೆ 2020ರಲ್ಲಿ ಉಗ್ರರ ದಾಳಿಗಳ ಸಂಖ್ಯೆ ಮತ್ತು ಆ ದಾಳಿಯಿಂದ ಉಂಟಾಗುವ ಒಟ್ಟಾರೆ ಸಾವು ನೋವುಗಳ ಸಂಖ್ಯೆ ಶೇ.10ಕ್ಕಿಂತ ಹೆಚ್ಚಾಗಿದೆ ಎಂದು ತೋರಿಸುತ್ತದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿದ್ದಾರೆ.
ಭಯೋತ್ಪಾದನೆಗೆ ಪಾಕಿಸ್ತಾನದ ಲಿಂಕ್..
ಲಷ್ಕರ್ - ಎ - ತೊಯ್ಬಾ ಮತ್ತು ಅದರ ಅಂಗಸಂಸ್ಥೆಯ ಮುಂಚೂಣಿ ಸಂಘಟನೆಗಳು ಭಾರತವನ್ನು ಗುರಿಯಾಗಿಸಿಕೊಂಡ ಪಾಕಿಸ್ತಾನದ ಭೂಪ್ರದೇಶದಿಂದಲೇ ಕಾರ್ಯಾಚರಣೆ ಮುಂದುವರೆಸಿವೆ. ಪಾಕಿಸ್ತಾನವು ಭಯೋತ್ಪಾದಕ ಮಸೂದ್ ಅಜರ್ ವಿರುದ್ಧ ಕ್ರಮ ಕೈಗೊಂಡಿಲ್ಲ. 2008ರ ಮುಂಬೈ ದಾಳಿಯ 'ಪ್ರಾಜೆಕ್ಟ್ ಮ್ಯಾನೇಜರ್' ಸಾಜಿದ್ ಮಿರ್ ಇವರಿಬ್ಬರೂ ಪಾಕಿಸ್ತಾನದಲ್ಲಿ ಸ್ವತಂತ್ರರಾಗಿ ಓಡಾಡುತ್ತಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಆದರೆ, 2020ರಲ್ಲಿ ಭಯೋತ್ಪಾದನೆಗೆ ಹಣಕಾಸು ಒದಗಿಸುವುದು, ಭಾರತವನ್ನು ಗುರಿಯಾಗಿಸಿ ಉಗ್ರ ಗುಂಪುಗಳು ದಾಳಿ ನಡೆಸದಂತೆ ತಡೆಯಲು ಇಸ್ಲಾಮಾಬಾದ್ ಕ್ರಮಗಳನ್ನು ತೆಗೆದುಕೊಂಡಿದೆ ಎಂತಲೂ ಹೇಳಿದೆ.
ಕಳೆದ ವರ್ಷ ಸೆಪ್ಟೆಂಬರ್ 19 ಮತ್ತು 26 ರಂದು ಕೇರಳ ಮತ್ತು ಪಶ್ಚಿಮ ಬಂಗಾಳದಿಂದ 10 ಅಲ್ ಖೈದಾ - ಸಂಯೋಜಿತ ಕಾರ್ಯಕರ್ತರನ್ನು ಎನ್ಐಎ ಬಂಧಿಸಿದೆ. ಒಟ್ಟಾರೆಯಾಗಿ ಭಾರತ ಸರ್ಕಾರವು ತನ್ನ ಗಡಿಯೊಳಗೆ ಭಯೋತ್ಪಾದಕ ಸಂಘಟನೆಗಳ ಕಾರ್ಯಾಚರಣೆ ಪತ್ತೆಹಚ್ಚಲು, ತಟಸ್ಥಗೊಳಿಸಲು ಗಮನಾರ್ಹ ಪ್ರಯತ್ನಗಳನ್ನು ಮಾಡಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಮತ್ತೆ 10 ಒಮಿಕ್ರಾನ್ ಕೇಸ್ ಪತ್ತೆ.. ಭಾರತದಲ್ಲಿ ಹೊಸ ರೂಪಾಂತರಿ ಸಂಖ್ಯೆ 92ಕ್ಕೆ ಏರಿಕೆ..