ನ್ಯೂಯಾರ್ಕ್: ಕೋವಿಡ್ -19 ಮಾರಕ ಸೋಂಕಿಗೆ ವೇಗವಾಗಿ ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಜಗತ್ತಿನ ಹಲವು ರಾಷ್ಟ್ರಗಳು ಸ್ಪರ್ಧೆಗೆ ಬಿದ್ದಿವೆ. ಈಗಾಗಲೇ ಆರು ಅಭ್ಯರ್ಥಿಗಳು ಕೊನೆಯ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಪ್ರವೇಶ ಪಡೆದಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ನ ವ್ಯಾಕ್ಸಿನ್ ಟ್ರ್ಯಾಕರ್ ತಿಳಿಸಿದೆ.
ಫಿಜರ್ ಮತ್ತು ಬಯೋಟೆಕ್ ತನ್ನ ಲಸಿಕೆ ಅಭ್ಯರ್ಥಿ BNT162b2ನ, ಒಟ್ಟು ಮೂರರಲ್ಲಿ ಎರಡನೇ ಹಂತದ ಅಧ್ಯಯನದ ಪ್ರಾರಂಭವನ್ನು ಸೋಮವಾರ ಪ್ರಕಟಿಸಿದೆ. ಈ ಎರಡನೇ ಹಂತದ ಅಧ್ಯಯನದಲ್ಲಿ 18 ರಿಂದ 85 ವರ್ಷದೊಳಗಿನ 30,000 ಸ್ವಯಂಸೇವಕರು ಭಾಗವಹಿಸಿದ್ದಾರೆ. ಮಾಡರ್ನಾ ನಡೆಸುತ್ತಿರುವ 3ನೇ ಹಂತದ ಪ್ರಯೋಗದಲ್ಲಿ ಕೋವಿಡ್ -19 ಹೊಂದಿಲ್ಲದ 30,000 ಮಂದಿ ಪಾಲ್ಗೊಳ್ಳುತ್ತಿದ್ದಾರೆ.
mRNA-1273 ಎಂಬ ಲಸಿಕೆಯನ್ನು ಕೊರೊನಾ ವೈರಸ್ "ಸ್ಪೈಕ್" ಪ್ರೋಟೀನ್‌ನ ಒಂದು ಭಾಗಕ್ಕೆ ನಿರ್ದೇಶಿಸಿ ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಪ್ರೇರೇಪಿಸಲು ವಿನ್ಯಾಸಗೊಳಿಸಲಾಗಿದೆ. ಇದನ್ನು ಈ ವೈರಸ್, ಮಾನವ ಜೀವಕೋಶಗಳಿಗೆ ಪ್ರವೇಶಿಸಿ ಬಂಧಿಸಲು ಬಳಸಿಕೊಳ್ಳುತ್ತದೆ.
ಲಸಿಕೆಯ ಅಭಿವೃದ್ಧಿಯಲ್ಲಿ 3ನೇ ಹಂತದ ಪ್ರಯೋಗವು ನಿರ್ಣಾಯಕವಾಗಿದೆ. ಇದು ಕೋವಿಡ್ ಮಹಾಮಾರಿಯನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲಿದೆ. ಈಗಾಗಲೇ ಕನಿಷ್ಠ ನಾಲ್ಕು ಇತರ ಕೋವಿಡ್ -19 ಲಸಿಕೆ ಗಳ ಮೇಲೆ 3ನೇ ಹಂತದ ಪ್ರಯೋಗಗಳನ್ನು ಮಾಡಲಾಗುತ್ತಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮತ್ತು ಬ್ರಿಟನ್ ಮೂಲದ ಜಾಗತಿಕ ಜೈವಿಕ ಔಷಧೀಯ ಕಂಪನಿ ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆ ಆರಂಭಿಕ ಪ್ರಗತಿ ಸಾಧಿಸಿದೆ. ಇದು ಈಗಾಗಲೇ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನಲ್ಲಿ ಕೊನೆಯ ಹಂತದ ಪ್ರಯೋಗಳಿಗೆ ಒಳಗಾಗಿದೆ.
ಕಳೆದ ವಾರ ದಿ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ನಲ್ಲಿ ಪ್ರಕಟವಾದ ಮಾಹಿತಿಯಂತೆ, ಲಸಿಕೆಯ ಒಟ್ಟು ಎರಡರಲ್ಲಿ ಒಂದನೇ ಹಂತದ ಪ್ರಯೋಗಗಳ ಫಲಿತಾಂಶವು ಸಕಾರಾತ್ಮಕವಾಗಿ ಬಂದಿದೆ. ಅಷ್ಟೇ ಅಲ್ಲ ಬಲವಾದ ರೋಗನಿರೋಧಕ ಪ್ರತಿಕ್ರಿಯೆಗಳನ್ನು ನೀಡಿದೆ ಎಂದು ದೃಢಪಟ್ಟಿದೆ. ಈ ಲಸಿಕೆಯ 3 ನೇ ಹಂತದ ಪ್ರಯೋಗವನ್ನು ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ನಡೆಸಲಾಗುತ್ತಿದೆ. ಈ ಲಸಿಕೆಯನ್ನು ಭಾರತದಲ್ಲಿ ಕೋವಿಶೀಲ್ಡ್ ಎಂದು ಕರೆಯಲಾಗುತ್ತದೆ.
3ನೇ ಹಂತದ ಕ್ಲಿನಿಕಲ್ ಪ್ರಯೋಗಗಳು ಭಾರತದಲ್ಲಿ ಇದೇ ಆಗಸ್ಟ್ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಪ್ರಯೋಗದಲ್ಲಿ 4,000ದಿಂದ 5,000 ಕೋವಿಡ್ ರೋಗಿಗಳು ಭಾಗವಹಿಸುವ ಸಾಧ್ಯತೆಯಿದೆ.