ರಿಯೋ ಡಿ ಜನೈರೊ: ಕ್ರಿಸ್‌ಮಸ್ ಸಮಾರಂಭದ ವೇಳೆ ಪಾದಚಾರಿ ಮಾರ್ಗ ಕುಸಿದು ಬರೋಬ್ಬರಿ 33 ಮಂದಿ ಗಾಯಗೊಂಡ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ.
21 ವಯಸ್ಕರು ಮತ್ತು 12 ಮಕ್ಕಳು ಕ್ರಿಸ್‌ಮಸ್ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಂಟಾ ಕ್ಯಾಟರಿನಾ ರಾಜ್ಯದ ಜಾಯ್ನ್‌ವಿಲ್ಲೆಗೆ ಆಗಮಿಸಿದ್ದರು. ಜನಪ್ರಿಯ ರಜಾದಿನದ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕ್ರಿಸ್‌ಮಸ್ ದೀಪಗಳನ್ನು ಬೆಳಗಿಸಲಾಯಿತು. ಈ ವೇಳೆ, ನದಿ ಪಕ್ಕದ ಪಾದಚಾರಿ ಮಾರ್ಗ ಕುಸಿದು ಬಿದ್ದು, ಆಗ್ನೇಯ ಬ್ರೆಜಿಲ್‌ನಲ್ಲಿ 33 ಜನರು ಗಾಯಗೊಂಡಿದ್ದಾರೆ. ಸೋಮವಾರ ಸಂಜೆ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ಯಾಚೊಯೈರಾ ನದಿಯ ಪಕ್ಕದ ಪಾದಚಾರಿ ಮಾರ್ಗ ಕುಸಿದಿದೆ. ರಸ್ತೆ ಕುಸಿದ ಹಿನ್ನೆಲೆ ಜನರು ನದಿಗೆ ಬಿದ್ದಿದ್ದಾರೆ, ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಯಾರೂ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.