ವಾಷಿಂಗ್ಟನ್ ಡಿ.ಸಿ (ಅಮೆರಿಕ): ಆ್ಯಪ್ ಬ್ಯಾನ್ ವಿಚಾರದಲ್ಲಿ ಭಾರತದ ನೀತಿಯನ್ನೇ ಅನುಸರಿಸಿ ಅಮೆರಿಕದಲ್ಲಿ ಟಿಕ್ ಟಾಕ್ ಸೇರಿದಂತೆ ಹಲವು ಅಪ್ಲಿಕೇಷನ್ಗಳನ್ನು ಬ್ಯಾನ್ ಮಾಡಬೇಕೆಂದು 25 ಯುಎಸ್ ಸಂಸದರ ತಂಡ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಒತ್ತಾಯಿಸಿದೆ.
ಜುಲೈ 15ರಂದು ಬರೆದಿರುವ ಪತ್ರಗಳಲ್ಲಿ ಸಂಸದರು ಈ ರೀತಿಯಾಗಿ ಆಗ್ರಹಿಸಿ ಸಹಿ ಮಾಡಿದ್ದು, ದೇಶದ ರಕ್ಷಣೆಯ ಹಾಗೂ ಅಮೆರಿಕ ಪ್ರಜೆಗಳ ಮೇಲಿನ ಕಾಳಜಿಯಿಂದಾಗಿ ಟಿಕ್ ಟಾಕ್ ಸೇರಿದಂತೆ ಹಲವು ಅಪ್ಲಿಕೇಷನ್ಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ವಿಚಾರದಲ್ಲಿ ಭಾರತ ಅತ್ಯಂತ ಗಟ್ಟಿ ನಿರ್ಧಾರವನ್ನು ತೆಗೆದುಕೊಂಡಿದೆ. ಚೀನಾದ ಕಮ್ಯುನಿಸ್ಟ್ ಪಾರ್ಟಿ ಆ್ಯಪ್ಗಳ ಮೂಲಕ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಎಂದು ಆರೋಪಿಸಿರುವ ಸಂಸದರು ಕೂಡಲೇ ಟಿಕ್ಟಾಕ್ ಹಾಗೂ ಇತರ ಅಪ್ಲಿಕೇಷನ್ಗಳನ್ನು ಮಾಡಿ ಅಮೆರಿಕನ್ನರ ಖಾಸಗಿತನವನ್ನು ರಕ್ಷಿಸಬೇಕೆಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಕೆಲವು ದಿನಗಳ ಮೊದಲೇ ಅಮೆರಿಕದ ಸಚಿವ ಮೈಕ್ ಪೋಂಪಿಯೋ ಚೀನಾದ ಆ್ಯಪ್ಗಳನ್ನು ಬ್ಯಾನ್ ಮಾಡುವ ಚಿಂತನೆ ನಡೆಸುವುದಾಗಿ ಹೇಳಿಕೆ ನೀಡಿದ್ದರು. ಈ ವಿಚಾರ ಮತ್ತಷ್ಟು ಮುನ್ನೆಲೆಗೆ ಬಂದಿದ್ದು, ಈಗ ಅಮೆರಿಕ ಸಂಸದರು ಚೀನಾ ಆ್ಯಪ್ಗಳನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದಾರೆ.
ಭಾರತ- ಚೀನಾ ಗಡಿಯ ಗಾಲ್ವಾನ್ ಕಣಿವೆಯಲ್ಲಿ ಸಂಘರ್ಷದ ನಂತರ ಭಾರತ ಚೀನಾ ಮೂಲದ ಆ್ಯಪ್ಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು. ಈಗ ಅಮೆರಿಕ ಕೂಡಾ ಇದೇ ಹಾದಿಯಲ್ಲಿ ಸಾಗುತ್ತಿದ್ದು, ಚೀನಾ ಆರ್ಥಿಕತೆ ಮೇಲೆ ಮತ್ತೊಂದು ಪೆಟ್ಟು ಬೀಳುವ ಸಾಧ್ಯತೆಯಿದೆ.