ವಾಷಿಂಗ್ಟನ್: ಕೊರೊನಾ ಸೋಂಕಿನಿಂದ ಯುಎಸ್ನಲ್ಲಿ 2 ಲಕ್ಷ ಸಾವು ಸಂಭವಿಸಿದ್ದು ಅವಮಾನ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಕೋವಿಡ್ನಿಂದಾಗಿ ಎರಡು ಲಕ್ಷ ಸಾವುಗಳು ಸಂಭವಿಸಿದ ಬಗ್ಗೆ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಅಮೆರಿಕ ಈ ಮೈಲಿಗಲ್ಲು ತಲುಪಿರುವುದು ಅವಮಾನ ಎಂದು ಹೇಳಿದರು. ಆದರೆ ತಮ್ಮ ಆಡಳಿತ ಉತ್ತಮ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಆ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿತ್ತು ಎಂದಿದ್ದಾರೆ.
ಒಂದು ವೇಳೆ ಸರಿಯಾದ ಕ್ರಮಗಳನ್ನು ಕೈಗೊಳ್ಳದಿದ್ದರೆ 2.5 ಲಕ್ಷಕ್ಕೂ ಅಧಿಕ ಸಾವುಗಳು ಸಂಭವಿಸುತ್ತಿದ್ದವು. ಅಮೆರಿಕ ಈಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಷೇರು ಮಾರುಕಟ್ಟೆ ಕೂಡ ಏರಿಕೆ ಕಾಣುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ.
ಈ ಸಾಂಕ್ರಾಮಿಕ ರೋಗಕ್ಕೆ ಚೀನಾ ದೇಶವೇ ಮುಖ್ಯ ಕಾರಣ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.