ಜೋಹಾನ್ಸ್ಬರ್ಗ್: ಪಾಕಿಸ್ತಾನ ತಂಡ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಅತಿಥೇಯ ದ.ಆಫ್ರಿಕಾ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ 2-2 ರಲ್ಲಿ ಸಮಬಲ ಸಾಧಿಸಿದೆ.
ಟಾಸ್ ಗೆದ್ದ ಪಾಕ್ ನಾಯಕ ಮಲ್ಲಿಕ್ ಎದುರಾಳಿ ತಂಡಕ್ಕೆ ಬ್ಯಾಟಿಂಗ್ ಅಹ್ವಾನ ನೀಡಿದರು. ಇದರ ಫಲ ಬೇಗನೆ ಫಲಿಸಿತು. ಕೇವಲ 18 ರನ್ಗಳಿಸುವಷ್ಟರಲ್ಲಿ ಡಿಕಾಕ್(0) ಹಾಗೂ ಕಳೆದ ಪಂದ್ಯದ ಹೀರೋ ರೀಝಾ ಹೆಂಡ್ರಿಕ್ಸ್(2) ಪೆವಿಲಿಯನ್ ಸೇರಿಕೊಂಡರು. ನಂತರ ಒಂದಾದ ಆಮ್ಲ (59) ಹಾಗೂ ಪ್ಲೆಸಿಸ್(57) 3ನೇ ವಿಕೆಟ್ಗೆ 101 ರನ್ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು.
ಆದರೆ ಇವರಿಬ್ಬರ ವಿಕೆಟ್ ಪತನದ ನಂತರ ತರಗೆಲೆಯಂತೆ ಉದುರಿದ ಹರಿಣಗಳ ಪಡೆ 41 ಓವರ್ಗಳಲ್ಲಿ ಕೇವಲ 164 ರನ್ಗೆ ಸರ್ವ ಪತನ ಕಂಡಿತು. ಅದ್ಭುತ ಬೌಲಿಂಗ್ ದಾಳಿ ನಡೆಸಿದ ಉಸ್ಮಾನ್ ಖಾನ್ 4, ಶಾಹೀನ್ ಅಫ್ರಿದಿ 2, ಶದಾಬ್ ಖಾನ್ 2, ಇಮಾದ್ ವಾಸಿಂ,ಅಮೀರ್ ತಲಾ ಒಂದು ವಿಕೆಟ್ ಪಡೆದರು.
165 ರನ್ಗಳ ಗುರಿ ಪಡೆದಿದ್ದ ಪಾಕಿಸ್ತಾನ 2 ವಿಕೆಟ್ ಕಳೆದುಕೊಂಡು 31.3 ಓವರ್ಗಳಲ್ಲಿ ಗುರಿ ತಲುಪಿ ಜಯ ಸಾಧಿಸಿತು. ಇಮಾಮ್ ಉಲ್-ಹಕ್ 71 ರನ್ಗಳಿಸಿ ಪೆಹ್ಲುಕ್ವಾಯೋಗೆ ಹಾಗೂ ಫಾಕರ್ ಝಮಾನ್ (44) ತಾಹಿರ್ಗೆ ವಿಕೆಟ್ ಒಪ್ಪಿಸಿದರು. ಕೊನೆಗೆ ಬಾಬರ್ ಅಜಾಮ್ 41 ಹಾಗೂ ರಿಜ್ವಾನ್ ತಾವೆದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಗೆಲುವಿನ ದಡ ಸೇರಿಸಿದರು.
5 ಪಂದ್ಯಗಳ ಸರಣಿಯಲ್ಲಿ ಎರಡು ತಂಡಗಳು 2-2 ರಲ್ಲಿ ಸಮಬಲ ಸಾಧಿಸಿದ್ದು, ಮುಂದಿನ ಪಂದ್ಯ ಎರಡು ತಂಡಕ್ಕೂ ಮಹತ್ವದ ಪಂದ್ಯವಾಗಲಿದೆ. ಕೊನೆಯ ಪಂದ್ಯ ಜನವರಿ 30 ಕೇಪ್ಟೌನ್ನಲ್ಲಿ ನಡೆಯಲಿದೆ.