ಲಾಗೋಸ್: ನೈಜೀರಿಯಾ ಸರ್ಕಾರವು ಅನಿರ್ದಿಷ್ಟಾವಧಿಗೆ ಟ್ಟಿಟ್ಟರ್ಗೆ ನಿಷೇಧ ಹೇರಿದ್ದು, ಶನಿವಾರದಿಂದ ಮೈಕ್ರೋಬ್ಲಾಗಿಂಗ್ ಆ್ಯಪ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಇದರಿಂದ ಲಕ್ಷಾತಂರ ನೈಜೀರಿಯನ್ನರು ಟ್ವಿಟ್ಟರ್ ಬಳಕೆ ಮಾಡದಂತಾಗಿದೆ.
ನೈಜೀರಿಯಾದ ಪರವಾನಗಿ ಪಡೆದ ದೂರಸಂಪರ್ಕ ನಿರ್ವಾಹಕರ ಸಂಘವು, ಸರ್ಕಾರದ ನಿರ್ದೇಶಾನುಸಾರ ತನ್ನ ಸದಸ್ಯರು ಟ್ವಿಟ್ಟರ್ ಬಳಕೆ ಮಾಡದಂತೆ ಸೂಚಿಸಿರುವುದಾಗಿ ಹೇಳಿದೆ.
ನೈಜೀರಿಯಾ ಅಧ್ಯಕ್ಷ ಮುಹಮ್ಮದ್ ಬುಹಾರಿ ಪ್ರತ್ಯೇಕತಾವಾದಿ ಚಳವಳಿಯ ಬಗ್ಗೆ ಮಾಡಿದ ವಿವಾದಾತ್ಮಕ ಟ್ವೀಟ್ ಅನ್ನು ಟ್ವಿಟ್ಟರ್ ಅಳಿಸಿ ಹಾಕಿತ್ತು. ಇದರಿಂದ ಕೋಪಗೊಂಡು ಆಫ್ರಿಕಾ ಖಂಡದಲ್ಲೇ ಹೆಚ್ಚು ಜನಸಂಖ್ಯೆ ಹೊಂದಿರುವ ನೈಜೀರಿಯಾ ಟ್ವಿಟ್ಟರ್ ಅನ್ನು ಅನಿರ್ದಿಷ್ಟಾವಧಿಗೆ ನಿಷೇಧಿಸಿದೆ.
ನೈಜೀರಿಯಾದ ಸಾಂಸ್ಥಿಕ ಅಸ್ತಿತ್ವವನ್ನು ಹಾಳು ಮಾಡುವ ಸಾಮರ್ಥ್ಯವಿರುವ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸಿಕೊಡುತ್ತಿರುವುದರಿಂದ ಟ್ವಿಟ್ಟರ್ಗೆ ನಿಷೇಧ ಹೇರಲು ನಿರ್ಧರಿಸಲಾಗಿದೆ ಎಂದು ಮಾಹಿತಿ ಮತ್ತು ಸಂಸ್ಕೃತಿ ಸಚಿವ ಲೈ ಮೊಹಮ್ಮದ್ ಹೇಳಿದ್ದಾರೆ. ನೈಜೀರಿಯಾದಲ್ಲಿ ಟ್ವಿಟ್ಟರ್ನ ನಡೆ ತುಂಬಾ ಅನುಮಾನಾಸ್ಪದವಾಗಿದೆ ಎಂದು ಮೊಹಮ್ಮದ್ ಟ್ವಿಟ್ಟರ್ ಅನ್ನು ಟೀಕಿಸಿದ್ದಾರೆ. ನೈಜೀರಿಯಾ ಸರ್ಕಾರದ ವಿರುದ್ದದ ಟ್ವೀಟ್ಗಳನ್ನು ಟ್ವಿಟ್ಟರ್ ನಿರ್ಲಕ್ಷಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಇಗ್ಬೋಸ್ ಪ್ರತ್ಯೇಖ ರಾಷ್ಟ್ರ ಸಂಘರ್ಷ :
ಆಫ್ರಿಕಾದ ಆಗ್ನೇಯದಲ್ಲಿರುವ ಶಂಕಿತ ಉಗ್ರರಿಗೆ ಅಧ್ಯಕ್ಷರು ಬೆದರಿಕೆ ಹಾಕಿದ ಟ್ವೀಟ್ ಅನ್ನು ಟ್ವಿಟರ್ ಅಳಿಸಿ ಹಾಕಿತ್ತು. ಇಗ್ಬೋ ಜನಾಂಗದವರಿಗಾಗಿ ಸ್ವತಂತ್ರ ಬಿಯಾಫ್ರಾ ರಾಷ್ಟ್ರ ಸ್ಥಾಪಿಸಲು ಆಗ್ನೇಯಾದ ಪ್ರತ್ಯೇಖವಾದಿಗಳು ಪ್ರಯತ್ನಿಸಿದಾಗ, 1967-1970 ನಡುವೆ ನಡೆದ ಅಂತರ್ಯುದ್ದದಲ್ಲಿ ಸುಮಾರು 1 ದಶಲಕ್ಷ ಜನರು ಮೃತಪಟ್ಟಿದ್ದರು. ಫುಲಾನಿ ಜನಾಂಗದವರಾದ ಬುಹಾರಿ ಇಗ್ಬೋಸ್ ಎದುರಾಳಿ ಗುಂಪಿನವರು.
ಅಧ್ಯಕ್ಷರ ವಿವಾದಾತ್ಮಕ ಟ್ವೀಟ್ :
ಇತ್ತೀಚಿನ ದಿನಗಳಲ್ಲಿ ಬಿಯಾಫ್ರಾ ಪರವಾದ ಪ್ರತ್ಯೇಕತಾವಾದಿಗಳು ಪೊಲೀಸ್ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ಆಕ್ರಮಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಬಿಯಾಫ್ರಾ ಪ್ರತ್ಯೇಖವಾದಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಮತ್ತು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಹೊಡೆತ ನೀಡುವುದಾಗಿ ಬುಹಾರಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಅನ್ನು ಟ್ವಿಟ್ಟರ್ ಅಳಿಸಿ ಹಾಕಿತ್ತು.
ಟ್ವಿಟ್ಟರ್ ಬ್ಯಾನ್ಗೆ ಖಂಡನೆ :
ಸರ್ಕಾರ ಟ್ವಿಟ್ಟರ್ಗೆ ನಿಷೇಧ ಹೇರಿದ್ದನ್ನು ನೈಜೀರಿಯನ್ನು ಖಂಡಿಸಿದ್ದಾರೆ. ಇದು ಅಭಿವ್ಯಕ್ತಿ ಸ್ವಾಂತಂತ್ರ್ಯದ ದಮನಕಾರಿ ನೀತಿ ಎಂದು ಆರೋಪಿಸಿದ್ದಾರೆ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಕೂಡ ಟ್ವಿಟ್ಟರ್ ನಿಷೇಧವನ್ನು ಖಂಡಿಸಿದೆ.
ಇದನ್ನೂ ಓದಿ : ಕಾಶ್ಮೀರಕ್ಕಾಗಿ ಮುಸ್ಲಿಂ ರಾಷ್ಟ್ರಗಳ ಬೆಂಬಲಕ್ಕೆ ಮುಂದಾದ ಪಾಕ್: ಭಾರತದ ಖಡಕ್ ಎಚ್ಚರಿಕೆ