ಮಾರಿಷಸ್: ಕೆಲ ದಿನಗಳ ಹಿಂದೆ ಜಪಾನ್ ಒಡೆತನದ ಹಡಗಿನಿಂದ ದೇಶದ ಕಡಲಿನ ಸಮೀಪ ಟನ್ ಗಟ್ಟಲೆ ಇಂಧನ ಸೋರಿಕೆಯಾಗಿದ್ದರಿಂದ, ಕಳೆದ ಶುಕ್ರವಾರ ತಡರಾತ್ರಿ ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರ ಮಾರಿಷಸ್ 'ಪರಿಸರ ತುರ್ತು ಪರಿಸ್ಥಿತಿ' ಘೋಷಿಸಿದೆ.
ಇಲ್ಲಿನ ಪರಿಸರ ಪ್ರದೇಶಗಳ ಸಮೀಪ ಇರುವ ಸಮುದ್ರದ ನೀರಿನ ಬಣ್ಣ ಬದಲಾಗಿರುವ ಚಿತ್ರವನ್ನು ಉಪಗ್ರಹ ತೆಗೆದಿದೆ. ಇದು ಸೂಕ್ಷ್ಮ ವಿಚಾರ ಎಂದು ತಿಳಿಸಿರುವ ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಹಡಗು ಸುಮಾರು 4,000 ಟನ್ ಇಂಧನವನ್ನು ಸಾಗಿಸುತ್ತಿತ್ತು. ಹಡಗಿನಲ್ಲಿ ಬಿರುಕು ಕಾಣಿಸಿಕೊಂಡ ಪ್ರಭಾವ ಇಂಧನ ಸೋರಿಕೆಯಾಗಿದೆ. ಹಡಗು ಸಮುದ್ರದಲ್ಲೇ ಸಿಕ್ಕಿ ಹಾಕಿಕೊಂಡಿದೆ ಎಂದು ಮಾರಿಷಸ್ ಸರ್ಕಾರ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ಪ್ರಧಾನಿ ಜುಗ್ನಾಥ್, ದೇಶವು ಸಹಾಯಕ್ಕಾಗಿ ಫ್ರಾನ್ಸ್ ಬಳಿ ಮನವಿ ಮಾಡುತ್ತಿದೆ. 13 ಲಕ್ಷ ಜನಸಂಖ್ಯೆಯ ದೇಶಕ್ಕೆ ಈ ಸೋರಿಕೆ ತುಂಬಾ ಅಪಾಯವನ್ನು ತಂದೊಡ್ಡಿದೆ. ಪ್ರವಾಸೋದ್ಯಮವನ್ನು ಹೆಚ್ಚು ಅವಲಂಬಿಸಿರುವ ರಾಷ್ಟ್ರಕ್ಕೆ ಕೊರೊನಾ ವೈರಸ್ ತೀವ್ರವಾಗಿ ಹಾನಿಯುಂಟು ಮಾಡಿತ್ತು. ಈಗ ಮತ್ತೆ ಹೊಸ ಅಪಾಯ ಎದುರಾಗಿದೆ ಎಂದಿದ್ದಾರೆ.
ಸಮುದ್ರದಲ್ಲಿ ಸಿಕ್ಕಿಬಿದ್ದ ಹಡಗನ್ನು ಮರು ಹೊಂದಿಸುವ ಕೌಶಲ್ಯ ಮತ್ತು ಪರಿಣತಿಯನ್ನು ನಮ್ಮ ದೇಶ ಹೊಂದಿಲ್ಲ. ಹೀಗಾಗಿ ನಾನು ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಅವರ ಸಹಾಯಕ್ಕಾಗಿ ಮನವಿ ಮಾಡಿದ್ದೇನೆ. ಮುಂದೆ ಏನಾಗಬಹುದು ಎಂಬ ಭೀತಿಯಲ್ಲಿ ತಾನಿರುವುದಾಗಿ ಜುಗ್ನಾಥ್ ತಿಳಿಸಿದ್ದಾರೆ.