ಟೋಕಿಯೋ(ಜಪಾನ್): ಟೋಕಿಯೋ ಒಲಿಂಪಿಕ್ಸ್ ನಡೆಯುತ್ತಿರುವ ಸ್ಥಳದಲ್ಲಿ 36 ವರ್ಷದ ವ್ಯಕ್ತಿಯೊಬ್ಬ ಚಾಕುವಿನಿಂದ 10 ಜನರಿಗೆ ಇರಿದಿದ್ದು, ಆತನ ಬಂಧನ ಮಾಡುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಿಳೆಯೊಬ್ಬಳ ಕೊಲೆ ಮಾಡುವ ಉದ್ದೇಶದಿಂದ ರೈಲಿನಲ್ಲಿ ಹತ್ತಿಕೊಂಡಿರುವ ವ್ಯಕ್ತಿ ಈ ಕೃತ್ಯವೆಸಗಿದ್ದಾನೆ.
ಹಲ್ಲೆಗೊಳಗಾಗಿರುವ 20 ವರ್ಷದ ಮಹಿಳೆ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದಂತೆ ಹಲ್ಲೆಗೊಳಗಾಗಿರುವ ಪ್ರಯಾಣಿಕರಿಗೂ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿ ತಿಳಿಸಿರುವ ಪ್ರಕಾರ, ತನ್ನ ನೆಮ್ಮದಿ ಹಾಳು ಮಾಡಿರುವ ಮಹಿಳೆಯ ಕೊಲೆ ಮಾಡುವ ಉದ್ದೇಶದಿಂದ ಈ ಕೃತ್ಯವೆಸಗಿರುವುದಾಗಿ ತಿಳಿಸಿದ್ದಾನೆ. ಯುವತಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದಾಳಿಗೆ ಮುಂದಾಗಿದ್ದಾನೆ. ಆಕೆಯ ಮೆಲೆ ಹಲ್ಲೆ ನಡೆಸಲು ಮುಂದಾದಾಗ ರೈಲಿನಲ್ಲಿದ್ದ ಕೆಲವರು ರಕ್ಷಣೆಗೆ ಮುಂದಾಗಿದ್ದು, ಈ ವೇಳೆ ಅವರೆಲ್ಲರಿಗೂ ಚಾಕುವಿನಿಂದ ಇರಿದಿದ್ದಾನೆ. ಇದಾದ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿರಿ: ಭಟ್ಕಳದಲ್ಲಿ ಶಂಕಿತ ಉಗ್ರನ ಬಂಧನ ಪ್ರಕರಣ: ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು
ಆತನ ಶರ್ಟ್ ಮೇಲೆ ರಕ್ತ ಬಿದ್ದಿರುವುದನ್ನ ನೋಡಿ ಸ್ಥಳೀಯ ವ್ಯಕ್ತಿಯೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಂಗಣದಿಂದ ಸುಮಾರು 15 ಕಿಲೋ ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ಜಪಾನ್ ರಾಜಧಾನಿ ಟೋಕಿಯೋದಲ್ಲಿ ಒಲಿಂಪಿಕ್ಸ್ ನಡೆಯುತ್ತಿದ್ದು, ನಾಳೆ ಕೊನೆಯ ದಿನವಾಗಿದೆ.