ಬೈರುತ್: ಲೆಬನಾನ್ ರಾಜಧಾನಿ ಬೈರುತ್ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 160ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 6 ಸಾವಿರ ಜನರು ಗಾಯಗೊಂಡಿದ್ದಾರೆ. ಇದೀಗ ಇದರ ನೈತಿಕ ಹೊಣೆ ಹೊತ್ತು ಅಲ್ಲಿನ ಪ್ರಧಾನಿ ಹಸನ್ ದಿಯಾಬ್ ರಾಜೀನಾಮೆ ನೀಡಿದ್ದಾರೆ.
ಆಗಸ್ಟ್ 4ರಂದು ಬೈರುತ್ ನಗರದ ಬಂದರು ಪ್ರದೇಶದಲ್ಲಿ ಸಂಭವಿಸಿದ ಸ್ಫೋಟಕ್ಕೆ ಇಡೀ ಜಗತ್ತು ಬೆಚ್ಚಿ ಬಿದ್ದಿತ್ತು. ಬಂದರು ಪ್ರದೇಶದಲ್ಲಿ ಶೇಖರಣೆ ಮಾಡಿಟ್ಟಿದ್ದ ಅಮೋನಿಯಂ ನೈಟ್ರೇಟ್ ಸ್ಪೋಟಗೊಂಡಿತ್ತು. ಇದೀಗ ಸುದ್ದಿವಾಹಿನಿವೊಂದರಲ್ಲಿ ಮಾತನಾಡಿರುವ ಹಸನ್ ದಿಯಾಬ್ ಈ ಮಾಹಿತಿ ನೀಡಿದ್ದಾರೆ.
ಸ್ಫೋಟಗೊಳ್ಳುತ್ತಿದ್ದಂತೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದ ಅಲ್ಲಿನ ಜನರು, ಹೊಸ ವ್ಯವಸ್ಥೆಯೊಂದಕ್ಕೆ ದಾರಿ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದರು. ಇದರ ಜತೆಗೆ ರಾಜೀನಾಮೆ ನೀಡಿ, ಇಲ್ಲವೇ ನೇಣು ಬಿಗಿದುಕೊಳ್ಳಿ ಎಂಬ ಫಲಕಗಳು ಪ್ರತಿಭಟನಾಕಾರರಿಂದ ಪ್ರದರ್ಶಿಸಲ್ಪಟ್ಟಿದ್ದವು.
ಕಳೆದ ಕೆಲ ದಿನಗಳ ಹಿಂದೆ ಅಲ್ಲಿನ ವಾರ್ತಾ ಸಚಿವ ಮನಾಲ್ ಅಬ್ದುಲ್ ಸಮದ್ ರಾಜೀನಾಮೆ ನೀಡಿದ್ದರು. ಕಳೆದ ಮೂರು ದಶಕಗಳ ಭ್ರಷ್ಟ ರಾಜಕೀಯ ಆಡಳಿತದಿಂದಾಗಿ ಆಗಸ್ಟ್ 4ರಂದು ಭೀಕರ ಸ್ಫೋಟ ಸಂಭವಿಸಲು ಕಾರಣವಾಗಿದೆ ಎಂದು ಅಲ್ಲಿನ ಸಾರ್ವಜನಿಕರು ಉಗ್ರ ಪ್ರತಿಭಟನೆ ನಡೆಸಿದ್ದರು.