ನವದೆಹಲಿ: ಪಾಕಿಸ್ತಾನದಲ್ಲಿರುವ ತೇರಿ ದೇವಸ್ಥಾನಕ್ಕೆ ಪಾರದರ್ಶಕವಲ್ಲದ ರೀತಿಯಲ್ಲಿ ಭಾರತದ ಆಯ್ದೆ ಜನರನ್ನು ಆಹ್ವಾನಿಸಿರುವ ಪಾಕ್ ಸರ್ಕಾರದ ನಿರ್ಧಾರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಪಾಕಿಸ್ತಾನದ ಈ ನಡೆ ಸ್ವೀಕಾರಾರರ್ಹವಲ್ಲ ಎಂದು ಸರ್ಕಾರ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ತೇರಿ ದೇವಸ್ಥಾನಕ್ಕೆ ಪಾರದರ್ಶಕವಲ್ಲದ ರೀತಿಯಲ್ಲಿ ಭೇಟಿ ನೀಡುವಂತೆ ಭಾರತದಿಂದ ಆಯ್ದ ಗುಂಪನ್ನು ಆಹ್ವಾನಿಸಲು ಪಾಕಿಸ್ತಾನ ಯೋಜಿಸಿತ್ತು. ಇದು ನಮಗೆ ಸ್ವೀಕಾರಾರ್ಹವಲ್ಲ. ಇದು ಉಭಯ ದೇಶಗಳ ತೀರ್ಥಯಾತ್ರೆಗಳ ಮನೋಭಾವಕ್ಕೂ ವಿರುದ್ಧವಾಗಿದೆ ಎಂದು ಹೇಳಿದೆ.
ಸುಮಾರು 160 ಭಾರತೀಯ ಯಾತ್ರಾರ್ಥಿಗಳು ಇಂದು ವಾಘಾ-ಅಟ್ಟಾರಿ ಗಡಿಯ ಮೂಲಕ ಪಾಕಿಸ್ತಾನಕ್ಕೆ ತೆರಳಲಿದ್ದಾರೆ. ಯಾತ್ರಾರ್ಥಿಗಳಿಗೆ ಎಲ್ಲಾ ನೆರವು ನೀಡಲು ಭಾರತ ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿದೆ.
ಭಾರತ, ಯುಎಸ್ ಮತ್ತು ಯುಎಇಯಿಂದ 250 ಹಿಂದೂ ಯಾತ್ರಾರ್ಥಿಗಳ ತಂಡ ತೇರಿಯಲ್ಲಿರುವ ಶತಮಾನದಷ್ಟು ಹಳೆಯದಾದ ದೇಗುಲಕ್ಕೆ ಭೇಟಿ ನೀಡಬೇಕಿತ್ತು. ದ್ವಿಪಕ್ಷೀಯ ಶಿಷ್ಟಾಚಾರದ ಅಡಿ ಭಾರತದಿಂದ ಸಿಖ್ ಮತ್ತು ಹಿಂದೂ ಯಾತ್ರಿಕರು ಪ್ರತಿ ವರ್ಷ ಪಾಕಿಸ್ತಾನದ ತಮ್ಮ ಧಾರ್ಮಿಕ ದೇವಾಲಯಗಳಿಗೆ ಭೇಟಿ ನೀಡುತ್ತಾರೆ.
ತೇರಿ ದೇವಾಲಯವನ್ನು 1919 ರಲ್ಲಿ ಕರಕ್ ಜಿಲ್ಲೆಯ ತೇರಿ ಗ್ರಾಮದಲ್ಲಿ ನಿಧನರಾದ ಪರಮಹಂಸ ಮಹಾರಾಜ್ ಎಂಬ ಸಂತರಿಗೆ ಸಮರ್ಪಿಸಲಾಗಿದೆ. ಈ ದೇವಾಲಯವನ್ನು 1920ರಲ್ಲಿ ಸ್ಥಾಪಿಸಲಾಗಿತ್ತು.
ಇದನ್ನೂ ಓದಿ: ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ರೆ ನಾವು, ನಮ್ಮ ಮಿತ್ರರಾಷ್ಟ್ರಗಳು ಸುಮ್ನೆ ಇರಲ್ಲ: ರಷ್ಯಾಗೆ ಅಮೆರಿಕ ಎಚ್ಚರಿಕೆ