ಕೈರೋ, ಈಜಿಪ್ಟ್ : ಲಿಬಿಯಾ ಸರ್ವಾಧಿಕಾರಿಯಾಗಿದ್ದ ಮುಅಮ್ಮರ್ ಗಡಾಫಿ ( Moammar Gadhafi) ಅವರ ಪುತ್ರ ಸೈಫ್ ಅಲ್-ಇಸ್ಲಾಂ ಮುಂದಿನ ತಿಂಗಳು ನಡೆಯಲಿರುವ ದೇಶದ ಅಧ್ಯಕ್ಷೀಯ ಚುನಾವಣೆಗೆ ತಮ್ಮ ಉಮೇದುವಾರಿಕೆಯನ್ನು ಭಾನುವಾರ ಘೋಷಿಸಿದ್ದಾರೆ ಎಂದು ಲಿಬಿಯಾದ ಚುನಾವಣಾ ಸಂಸ್ಥೆ (Libya's election agency) ತಿಳಿಸಿದೆ.
ಸೈಫ್ ಅಲ್-ಇಸ್ಲಾಂ (Seif al-Islam) ಅವರು ತಮ್ಮ ಉಮೇದುವಾರಿಕೆ ಪತ್ರವನ್ನು ದಕ್ಷಿಣದ ಸಬಾಹ್ ಪಟ್ಟಣದಲ್ಲಿ ಸಲ್ಲಿಸಿದ್ದಾರೆ ಎಂದು ಚುನಾವಣಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಉಮೇದುವಾರಿಕೆ ಸಲ್ಲಿಕೆ ನಂತರ ಮಾತನಾಡಿರುವ ಸೈಫ್ ಅಲ್-ಇಸ್ಲಾಂ, ದೇಶದ ಭವಿಷ್ಯಕ್ಕಾಗಿ ದೇವರು ಸರಿಯಾದ ಮಾರ್ಗವನ್ನು ನಿರ್ಧರಿಸುತ್ತಾನೆ ಎಂದಿದ್ದಾರೆ.
ಈ ವಿಡಿಯೋವನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ನಾಮಿನೇಷನ್ ಹಾಕುವ ವೇಳೆಯಲ್ಲಿ ಸೈಫ್ ಅಲ್-ಇಸ್ಲಾಂ ಲಿಬಿಯಾದ ಸಾಂಪ್ರದಾಯಿಕ ನಿಲುವಂಗಿ ಮತ್ತು ಪೇಟ ಮತ್ತು ಕನ್ನಡಕವನ್ನು ಧರಿಸಿದ್ದರು.
ಗಡಾಫಿಗೆ ಎಂಟು ಮಕ್ಕಳಿದ್ದು, ಅವರಲ್ಲಿ ಎಲ್ಲರೂ ಗಡಾಫಿ ಸರ್ವಾಧಿಕಾರದ ವೇಳೆಯ ಆಡಳಿತದಲ್ಲಿ ಸಹಕರಿಸಿದವರೇ ಆಗಿದ್ದರು. ಗಡಾಫಿ ಕೊಲ್ಲಲ್ಪಟ್ಟ ವೇಳೆಯಲ್ಲೇ ಆತನ ಮಗ ಮುತಾಸಿಮ್ ಕೊಲ್ಲಲ್ಪಟ್ಟನು. ನಂತರ ನಡೆದ ದಂಗೆಗಳಲ್ಲಿ ಇಬ್ಬರು ಪುತ್ರರಾದ ಸೀಫ್ ಅಲ್ ಅರಬ್ ಹಾಗೂ ಖಾಮಿಸ್ ಸಾವನ್ನಪ್ಪಿದ್ದರು.
ಇನ್ನೊಬ್ಬ ಮಗ ಅಲ್ ಸಾಧಿ ಗಡಾಫಿ ಟ್ರಿಪೋಲಿಯಲ್ಲಿ ಬಂಧನಕ್ಕೆ ಒಳಗಾಗಿ ಇದೇ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗಿದ್ದನು. ಸೈಫ್ ಅಲ್-ಇಸ್ಲಾಮ್ ಕೂಡ ಐದು ವರ್ಷಗಳ ಕಾಲ ಬಂಧನದಲ್ಲಿಟ್ಟು ಜೂನ್ 2017ರಲ್ಲಿ ಬಿಡುಗಡೆ ಮಾಡಲಾಗಿತ್ತು.
ಈಗ ಡಿಸೆಂಬರ್ 24ರಂದು ಲಿಬಿಯಾದಲ್ಲಿ ಅಧ್ಯಕ್ಷೀಯ ಚುನಾವಣೆ (Libya presidential election) ನಡೆಯಲಿದ್ದು, ಈ ಚುನಾವಣೆಯಲ್ಲಿ ಸ್ಪರ್ಧಿಸಲು ಸೈಫ್ ಅಲ್- ಇಸ್ಲಾಂ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: CBI, ED ಅಧಿಕಾರಾವಧಿ 5 ವರ್ಷ ವಿಸ್ತರಣೆಗೆ ಕೇಂದ್ರದಿಂದ ಸುಗ್ರೀವಾಜ್ಞೆ