ಅಬುಜಾ, ನೈಜೀರಿಯಾ: ಭಯೋತ್ಪಾದಕರ ದಾಳಿಯಿಂದಾಗಿ ಸೆಂಟ್ರಲ್ ನೈಜೀರಿಯಾದ ಪ್ಲಾಟ್ಯೂ ರಾಜ್ಯದಲ್ಲಿ 22 ಮಂದಿ ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಾಸ್ ನಾರ್ತ್ ಪ್ರದೇಶದ ರುಕುಬಾ ರಸ್ತೆಯಲ್ಲಿ ದಾಳಿ ನಡೆದಿದ್ದು, ಮುಸ್ಲಿಂ ಅನುಯಾಯಿಗಳು ತೆರಳುತ್ತಿದ್ದ ಐದು ಬಸ್ಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಪ್ಲಾಟ್ಯೂ ರಾಜ್ಯದ ಪೊಲೀಸ್ ವಕ್ತಾರ ಉಬಾಹ್ ಒಗಾಬಾ ಮಾಹಿತಿ ನೀಡಿದ್ದಾರೆ.
ಬೌಚಿ ರಾಜ್ಯದಲ್ಲಿ ವಾರ್ಷಿಕವಾಗಿ ನಡೆಯುವ ಜಾಕಿರ್ ಪ್ರಾರ್ಥನೆ ಮುಗಿಸಿಕೊಂಡು ಒಂಡೋ ರಾಜ್ಯದ ಇಕಾರೆಗೆ ವಾಪಸ್ಸಾಗುತ್ತಿದ್ದಾಗ ಮುಸ್ಲಿಂ ಅನುಯಾಯಿಗಳ ಮೇಲೆ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.
ದಾಳಿಕೋರರು ಸ್ಥಳೀಯ ಜನಾಂಗವಾದ ಇರಿಗ್ವೆ ಜನಾಂಗಕ್ಕೆ ಸೇರಿದವರೆಂದು ಶಂಕಿಸಲಾಗಿದೆ. ಆ ಜನಾಂಗ ಯುವಕರು ಮತ್ತು ಜನಾಂಗದ ಪರವಾಗಿರುವ ಮಂದಿಯಿಂದ ದಾಳಿ ನಡೆದಿರುವ ಸಾಧ್ಯತೆಯಿದೆ ಎಂದು ಒಗಾಬಾ ಹೇಳಿದ್ದಾರೆ.
ದಾಳಿ ನಡೆದ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿ, ಸೇನೆ ಮತ್ತು ಇತರ ಭದ್ರತಾ ಏಜೆನ್ಸಿಗಳು ಸುಮಾರು 21 ಮಂದಿಯನ್ನು ರಕ್ಷಿಸಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ 6 ಮಂದಿ ಶಂಕಿತರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಪಾಕ್ನ ಕರಾಚಿಯಲ್ಲಿ ಗ್ರೆನೇಡ್ ದಾಳಿ: ನಾಲ್ಕು ಮಕ್ಕಳು, ಆರು ಮಹಿಳೆಯರ ದುರ್ಮರಣ