ನವದೆಹಲಿ: 100 ದಿನಗಳ ಕರ್ತವ್ಯವನ್ನು ಪೂರೈಸಿದ ಕೋವಿಡ್ ವಾರಿಯರ್ಸ್ಗೆ, ವೈದ್ಯಕೀಯ ಸಿಬ್ಬಂದಿಗೆ ಅನುಗುಣವಾಗಿ ಸರ್ಕಾರಿ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ಅನುಮೋದಿಸಿದ್ದಾರೆ. ಹಾಗಾಗಿ ನೀಟ್‌ನ ಸ್ನಾತಕೋತ್ತರ ಪರೀಕ್ಷೆಯನ್ನು ಮುಂದೂಡಲಾಗಿದೆ.
ಪಿಎಂಒನಿಂದ ಹೊರಡಿಸಲಾದ ಹೇಳಿಕೆಯಲ್ಲಿ, ನೀಟ್‌ನ ಸ್ನಾತಕೋತ್ತರ ಪರೀಕ್ಷೆಯನ್ನು ಮುಂದಿನ 4 ತಿಂಗಳವರೆಗೆ ಮುಂದೂಡಲಾಗಿದ್ದು, ಮುಂದಿನ ಆಗಸ್ಟ್ ತಿಂಗಳಲ್ಲಿ ಪರೀಕ್ಷೆ ಮಾಡಲಾಗುವುದು ಎಂದು ತಿಳಿಸಿದೆ. ಹಾಗಾಗಿ ವಿದ್ಯಾರ್ಥಿಗಳನ್ನು, ವೈದ್ಯಕೀಯ ಅಧ್ಯಾಪಕರ ಮೇಲ್ವಿಚಾರಣೆಯಲ್ಲಿ ಕೋವಿಡ್ ನಿರ್ವಹಣಾ ಕರ್ತವ್ಯದಲ್ಲಿ ನಿಯೋಜಿಸಲಾಗುವುದು ಎಂದು ತಿಳಿಸಲಾಗಿದೆ.
ಎಂಬಿಬಿಎಸ್‌ನ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಟೆಲಿಕನ್ಸಲ್ಟೇಷನ್ ಅಡಿ ಬೋಧಕ ವರ್ಗದ ಮೇಲ್ವಿಚಾರಣೆಗೆ ಹಾಗೂ ಸಣ್ಣ ಪ್ರಮಾಣದಲ್ಲಿ ಕೋವಿಡ್ ಸೋಂಕಿರುವವರ ಚಿಕಿತ್ಸೆಗೆ ಬಳಸಬಹುದು. ಹಿರಿಯ ವೈದ್ಯರು ಮತ್ತು ದಾದಿಯರ ಮೇಲ್ವಿಚಾರಣೆಯಲ್ಲಿ ಬಿಎಸ್‌ಸಿ / ಜಿಎನ್‌ಎಂ ಅರ್ಹತೆ ಹೊಂದಿರುವ ದಾದಿಯರನ್ನು ಪೂರ್ಣ ಸಮಯದ ಕೋವಿಡ್ ಶುಶ್ರೂಷೆಗೆ ಬಳಸಬಹುದು ಎಂದು ಪಿಎಂಒ ತಿಳಿಸಿದೆ.
ಕೋವಿಡ್ ಚಿಕಿತ್ಸೆಯಲ್ಲಿ 100 ದಿನಗಳ ಕರ್ತವ್ಯವನ್ನು ಪೂರೈಸಿದ ವೈದ್ಯಕೀಯ ಸಿಬ್ಬಂದಿಗೆ 'ಪ್ರಧಾನಿ ಕೋವಿಡ್ ರಾಷ್ಟ್ರೀಯ ಸೇವಾ ಪ್ರಶಸ್ತಿ' ನೀಡಲಾಗುವುದು ಎಂದು ಪ್ರಧಾನಿ ಕಚೇರಿ ತಿಳಿಸಿದೆ.