ಹೈದರಾಬಾದ್ : ಮನರಂಜನಾ ಉದ್ಯಮದಲ್ಲಿ ಕೆಲಸ ಮಾಡುವ ಬಾಲನಟರ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಯಾವುದೇ ಬಾಲನಟನನ್ನು ಸತತವಾಗಿ 27 ದಿನಗಳಿಗಿಂತ ಹೆಚ್ಚು ಕೆಲಸಕ್ಕೆ ತೊಡಗಿಸಿಕೊಳ್ಳುವಂತಿಲ್ಲ ಹಾಗೂ ಆತನ/ ಆಕೆಯ ದುಡಿಮೆಯ ಶೇ 20 ರಷ್ಟನ್ನು ಆತನ/ ಆಕೆಯ ಹೆಸರಿನಲ್ಲಿರುವ ನಿಶ್ಚಿತ ಠೇವಣಿ ಖಾತೆಗೆ ಜಮೆ ಮಾಡಬೇಕೆಂದು ಆಯೋಗ ತಿಳಿಸಿದೆ.
'ಮನರಂಜನಾ ಉದ್ಯಮದಲ್ಲಿ ಮಕ್ಕಳ ಭಾಗವಹಿಸುವಿಕೆಗಾಗಿ ನಿಯಂತ್ರಕ ಮಾರ್ಗಸೂಚಿಗಳು' ಕರಡು- ಟಿವಿ ಕಾರ್ಯಕ್ರಮಗಳು, ರಿಯಾಲಿಟಿ ಶೋಗಳು, ಟಿವಿ ಸೀರಿಯಲ್ಗಳು, ಸುದ್ದಿ ಮತ್ತು ಮಾಹಿತಿ ಮಾಧ್ಯಮಗಳು, ಚಲನಚಿತ್ರ, ಓಟಿಟಿ ಮೀಡಿಯಾ ಕಂಟೆಂಟ್ ಅಥವಾ ಬಾಲನಟರನ್ನು ಒಳಗೊಂಡ ಯಾವುದೇ ವಾಣಿಜ್ಯ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಒಳಗೊಂಡಿದೆ.
ಬಾಲನಟರಿಗೆ ಕೆಲಸದ ಸ್ಥಳದಲ್ಲಿ ಮಾನಸಿಕ ಹಾಗೂ ದೈಹಿಕ ಒತ್ತಡದಿಂದ ಸಂರಕ್ಷಿಸುವುದು ಸೇರಿದಂತೆ ಅವರಿಗೆ ಆರೋಗ್ಯಕರ ಕೆಲಸದ ವಾತಾವರಣ ನಿರ್ಮಾಣ ಮಾಡುವುದು ಎನ್ಸಿಪಿಸಿಆರ್ ಹೊರಡಿಸಿರುವ ಕರಡು ಮಾರ್ಗಸೂಚಿಯ ಗುರಿಯಾಗಿದೆ.
ಬಾಲನಟರನ್ನು ಶೂಟಿಂಗ್ನಲ್ಲಿ ತೊಡಗಿಸಿಕೊಳ್ಳಬೇಕಾದರೆ ಜಿಲ್ಲಾಧಿಕಾರಿಯ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ ಹಾಗೂ ಬಾಲನಟರ ಮೇಲೆ ಯಾವುದೇ ರೀತಿಯ ದೌರ್ಜನ್ಯ ಅಥವಾ ಕಿರುಕುಳ ಎಸಗುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕಾಗುತ್ತದೆ.
ಯಾವುದೇ ಮಗು ಸತತವಾಗಿ 27 ದಿನಗಳಿಗೂ ಹೆಚ್ಚು ಕೆಲಸ ಮಾಡುವಂತಿಲ್ಲ. ಪ್ರತಿ ಮೂರು ಗಂಟೆಗಳಿಗೊಮ್ಮೆ ವಿರಾಮವಿರುವಂತೆ ಬಾಲನಟನೋರ್ವ ಒಂದು ದಿನದಲ್ಲಿ ಒಂದು ಶಿಫ್ಟ್ನಲ್ಲಿ ಕೆಲಸ ಮಾಡಬಹುದು ಹಾಗೂ ಜೀತ ಕಾರ್ಮಿಕ ವ್ಯವಸ್ಥೆ (ನಿಷೇಧ), 1976ರ ಕಾನೂನು ಪಾಲಿಸುವಂತೆ ಮಗುವನ್ನು ಯಾವುದೇ ಕಡ್ಡಾಯ ನಿಬಂಧನೆಗೊಳಪಡಿಸುವಂತಿಲ್ಲ.
ಶೂಟಿಂಗ್ನಲ್ಲಿ ಪಾಲ್ಗೊಳ್ಳುವ ಮಗುವಿನ ಶಿಕ್ಷಣಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವುದು ನಿರ್ಮಾಪಕನ ಕರ್ತವ್ಯವಾಗಿರಲಿದೆ. ಶೂಟಿಂಗ್ ಕಾರಣದಿಂದ ಶಾಲೆಗೆ ಗೈರಾಗುವ ವಿದ್ಯಾರ್ಥಿಗೆ ಖಾಸಗಿ ಶಿಕ್ಷಕರಿಂದ ಪಾಠ ಬೋಧನೆ ಮಾಡಿಸುವುದು ಕೂಡ ನಿರ್ಮಾಪಕನ ಕರ್ತವ್ಯವಾಗಿರುತ್ತದೆ.
ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಕ್ಕೆ ಬಾಲನಟರಿಗೆ ನೀಡಲಾಗುವ ಸಂಭಾವನೆಯ ಶೇ 20 ರಷ್ಟನ್ನು ಆತನ ಹೆಸರಿಗೆ, ಆತ ಪ್ರೌಢ ವಯಸ್ಕನಾದ ಮೇಲೆ ಸಿಗುವಂತೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇಡಬೇಕು.
ಮಗುವಿನ ವಯಸ್ಸು, ಪ್ರೌಢಿಮೆ, ಭಾವನಾತ್ಮಕ ಅಥವಾ ಮಾನಸಿಕ ಬೆಳವಣಿಗೆಗೆ ತಕ್ಕುದಲ್ಲದ, ಮಗುವಿಗೆ ಮುಜುಗರ ಮಾಡುವಂಥ ಪಾತ್ರಗಳಲ್ಲಿ ಬಾಲನಟರು ಕೆಲಸ ಮಾಡುವಂತಿಲ್ಲ. ಕೆಲಸದ ಸ್ಥಳವು ಮಕ್ಕಳಿಗೆ ಕಿರಿಕಿರಿಯಾಗದಂತೆ, ಸುರಕ್ಷಿತವಾಗಿರುವಂತೆ, ಯಾವುದೇ ಅಪಾಯಕಾರಿ ಕಾಸ್ಮೆಟಿಕ್ಸ್ ಬಳಸದಂತೆ ನೋಡಿಕೊಳ್ಳುವುದು ಪ್ರೊಡಕ್ಷನ್ ತಂಡದ ಜವಾಬ್ದಾರಿಯಾಗಿರುತ್ತದೆ.