ಬೆಂಗಳೂರು : ವಕೀಲರು ಕಾರುಗಳಲ್ಲಿ ಕೂತು ವಾದಿಸುವುದು ಸರಿಯಲ್ಲ, ಕೋರ್ಟ್‌ಗಳಿಗೆ ಕೆಲವೊಂದು ನಿಯಮಗಳಿವೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರು ಬೇಸರದಿಂದ ಬುದ್ಧಿ ಮಾತು ಹೇಳಿದರು.
ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗಗಳಲ್ಲಿ ಮಂಗನ ಕಾಯಿಲೆ ನಿಯಂತ್ರಣ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರಾದ ಕಾಶಿನಾಥ್ ಜೆ.ಡಿ. ಕಾರಿನಲ್ಲಿ ಕೂತು ವಾದಿಸಲು ಆರಂಭಿಸಿದರು. ಆದರೆ, ಸಿಗ್ನಲ್ ಸಮಸ್ಯೆಯಿಂದಾಗಿ ವಕೀಲ ಕಾಶಿನಾಥ್ ಹಾಗೂ ಸಿಜೆ ಅವರ ನಡುವಿನ ಸಂಭಾಷಣೆ ಏರುಪೇರಾಯಿತು.
ಈ ವೇಳೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರು, ನೀವು ಕಾರಿನಲ್ಲಿ ಕೂತು ವಾದಿಸುವುದು ಸರಿಯಲ್ಲ, ವರ್ಚುವಲ್ ಕೋರ್ಟ್‌ಗಳಿಗೆ ಕೆಲ ನಿಯಮಗಳಿವೆ. ದಯವಿಟ್ಟು ಇಂತಹ ಪದ್ದತಿ ಬಿಡಿ ಎಂದು ಬೇಸರದಿಂದ ಹೇಳಿದರು.
ಕೊನೆಗೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದ ಪೀಠ, ಬಾರ್ ಮೆಂಬರ್ಸ್ ಕನಿಷ್ಟ ಶಿಷ್ಟಾಚಾರ ಪಾಲಿಸಬೇಕು ಎಂದು ಆದೇಶಿಸಿತು.
ಪರಿಷತ್ ಅಧ್ಯಕ್ಷರಿಂದ ಎಚ್ಚರಿಕೆ :
ಈ ಕುರಿತು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಜೆ.ಎಂ. ಅನಿಲ್ ಕುಮಾರ್ ಅವರು ಪ್ರತಿಕ್ರಿಯಿಸಿ, ಕೋರ್ಟ್ ಕಲಾಪದಲ್ಲಿ ಭಾಗಿಯಾಗುವ ವಕೀಲರು ನಿಯಮಗಳು ಹಾಗೂ ಶಿಷ್ಟಾಚಾರವನ್ನು ಪಾಲಿಸುವಂತೆ ಈಗಾಗಲೇ ಸೂಚಿಸಿದ್ದೇವೆ ಎಂದರು.
ಇಂದಿನ ಘಟನೆ ಬೇಸರ ಉಂಟುಮಾಡಿದೆ. ವಕೀಲರು ಹೀಗೆ ನಡೆದುಕೊಳ್ಳುವುದರಿಂದ ವೃತ್ತಿಯ ಘನತೆಯೂ ಕುಗ್ಗುತ್ತದೆ. ಕೋರ್ಟ್ ಕಲಾಪಕ್ಕೂ ಅಡ್ಡಿಯಾಗುತ್ತದೆ. ಹೀಗಾಗಿ, ವಕೀಲರು ಆದಷ್ಟು ಸೂಕ್ತ ವ್ಯವಸ್ಥೆ ಮಾಡಿಕೊಂಡು ಕೋರ್ಟ್ ಕಲಾಪದಲ್ಲಿ ಭಾಗಿಯಾಗಬೇಕು. ಕಾರಿನಲ್ಲಿ ಕೂತು, ಪ್ರಯಾಣಿಸುತ್ತಾ ಅಥವಾ ಬೇರೆ ಯಾವುದೇ ರೀತಿಯಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ್ದು ಕಂಡು ಬಂದಲ್ಲಿ ಅಂತಹ ವಕೀಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.