ನವದೆಹಲಿ : ಕುಸ್ತಿಪಟು ಸಾಗರ್ ಧಂಕರ್ ಹತ್ಯೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗವು ಹರಿದ್ವಾರಕ್ಕೆ ತನಿಖೆಗೆ ಕರೆದೊಯ್ದಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ.
ದೆಹಲಿ ಪೊಲೀಸ್ ಅಪರಾಧ ವಿಭಾಗವು ಸುಶೀಲ್ ಕುಮಾರ್ ಜೊತೆಗೆ ಹರಿದ್ವಾರಕ್ಕೆ ತೆರಳಿದೆ. ಆತ ಅಡಗಿಕೊಂಡಿದ್ದ ಸ್ಥಳ ಮತ್ತು ಆತ ಪರಾರಿಯಾಗಿದ್ದಾಗ ಸಹಾಯ ಮಾಡಿದ ಜನರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಸಾಗರ್ ಧಂಕರ್ ಹತ್ಯೆಯ ನಂತರ ಸುಶೀಲ್ ಕುಮಾರ್ ಮೊದಲು ಹರಿದ್ವಾರಕ್ಕೆ ಹೋಗಿದ್ದರು. ಹರಿದ್ವಾರದಲ್ಲಿ ಸುಶೀಲ್ ಎಸೆದಿರುವ ಫೋನ್ ಪಡೆಯಲು ಅಪರಾಧ ವಿಭಾಗ ಪ್ರಯತ್ನಿಸುತ್ತಿದೆೆ ಎನ್ನಲಾಗಿದೆ.
ಇನ್ನು, ಸಾಗರ್ ಧಂಕರ್ನನ್ನು ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಸುಶೀಲ್ ಪೊಲೀಸರಿಗೆ ಪದೇಪದೆ ಹೇಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಾಗರ್ ಧಂಕರ್ ಕೊಲೆ ಪ್ರಕರಣದಲ್ಲಿ 13 ಜನರು ಭಾಗಿಯಾಗಿದ್ದಾರೆ ಎಂದು ದೆಹಲಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. 13ರಲ್ಲಿ 9 ಮಂದಿಯನ್ನು ಬಂಧಿಸಲಾಗಿದೆ. ಪರಾರಿಯಾಗಿದ್ದ ಉಳಿದ ನಾಲ್ವರನ್ನು ಗುರುತಿಸಲಾಗಿದ್ದು, ತನಿಖೆ ಮುಂದುವರೆದಿದೆ.