ಅರುಣಾಚಲ ಪ್ರದೇಶ: ಇಲ್ಲಿನ ಹಳ್ಳಿಯ ಬುಡಕಟ್ಟು ಸಮುದಾಯವು ಅಪರೂಪದ ಪಕ್ಷಿ ಪ್ರಭೇದಗಳ ರಕ್ಷಣೆಗಾಗಿ ತಮ್ಮನ್ನು ಅರ್ಪಿಸಿಕೊಂಡಿದೆ. ಅಷ್ಟೇ ಅಲ್ಲದೆ, ಆ ಪಕ್ಷಿಗೆ ಇದೇ ಬುಡಕಟ್ಟು ಜನಾಂಗದ ಹೆಸರಿದೆ ಎಂಬುದು ಆಶ್ಚರ್ಯಕರ ಸುದ್ದಿ. ಎಮಿ ಶಾನ್ ಲಿಯೋಸಿಚ್ಲಾ ಎಂಬ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿರುವ ಲಿಯೋಸಿಚ್ಲಾ ಬುಗುನ್ ಎಂಬ ಪಕ್ಷಿಯು 1995 ರಲ್ಲಿ ಅರುಣಾಚಲ ಪ್ರದೇಶದಲ್ಲಿ ಮೊದಲ ಬಾರಿಗೆ ಕಂಡು ಬಂದಿತು. ಆದರೆ, ಆ ಬಳಿಕ ಕಾಣೆಯಾದ ಆ ಪಕ್ಷಿ, ಅರುಣಾಚಲ ಪ್ರದೇಶದ ಪಶ್ಚಿಮ ಕಾಮೆಂಗ್ ಜಿಲ್ಲೆಯಲ್ಲಿ 2006ರಲ್ಲಿ ಮತ್ತೆ ಕಂಡು ಬಂತು.
ಪಕ್ಷಿ ಪ್ರಭೇದ ಗುರುತಿಸಿದ ಕೂಡಲೇ, ಬುಡಕಟ್ಟು ಜನಾಂಗದವರಾದ ಅರುಣಾಚಲ ಪ್ರದೇಶದ ಮಾಜಿ ಸಚಿವ ನರೇಶ್ ಗ್ಲೋ ಅವರು ಈ ಪಕ್ಷಿ ಪ್ರಭೇದಕ್ಕೆ ಆವಾಸ ಸ್ಥಾನವನ್ನು ಸ್ಥಾಪಿಸಲು ತಮ್ಮದೇ ಆದ 17 ಚದರ ಕಿಲೋಮೀಟರ್ ಭೂಮಿ ದಾನ ಮಾಡಿದರು. ಇದನ್ನು ಈಗ ಸಿಂಗಚುಂಗ್ ಬುಗುನ್ ಗ್ರಾಮ ಸಮುದಾಯದ ಅರಣ್ಯ ಪ್ರದೇಶ ಎಂದು ಕರೆಯಲಾಗುತ್ತದೆ.
ಬುಗುನ್ ಬುಡಕಟ್ಟು ಭಾರತದ ಆರಂಭಿಕ ಮಾನ್ಯತೆ ಪಡೆದ ಬುಡಕಟ್ಟು ಜನಾಂಗಗಳಲ್ಲಿ ಒಂದಾಗಿದೆ. ಅವರಲ್ಲಿ ಹೆಚ್ಚಿನವರು ಪಶ್ಚಿಮ ಕಾಮೆಂಗ್ ಜಿಲ್ಲೆಯ ಸಿಂಗ್‌ಚಂಗ್ ಉಪ ವಿಭಾಗದಲ್ಲಿ ವಾಸಿಸುತ್ತಿದ್ದಾರೆ ಎಂದು ಮಾಜಿ ಸಚಿವ ನರೇಶ್ ಗ್ಲೋ ಹೇಳಿದ್ದಾರೆ. ಇನ್ನು ಈ ಸಮುದಾಯದ ಜನಸಂಖ್ಯೆ ಕೇವಲ 3000 ಮಂದಿ ಮಾತ್ರ.
"ಬುಗನ್‌ಗಳು ಪ್ರಕೃತಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಮತ್ತು ಆದ್ದರಿಂದ ಈ ಅಪರೂಪದ ಪಕ್ಷಿ ಪ್ರಭೇದವನ್ನು 2006 ರಲ್ಲಿ ಗುರುತಿಸಿದ ಕೂಡಲೇ ಅದನ್ನು ನೋಡಿಕೊಳ್ಳಲು ನಾವು ನಿರ್ಧರಿಸಿದ್ದೇವೆ. 17 ಚದರ ಕಿ.ಮೀ ಪ್ರದೇಶವನ್ನು ಈಗ ನಮ್ಮ ಸಮುದಾಯದ ಜನರು ನಿರ್ವಹಿಸುತ್ತಿದ್ದಾರೆ. ಈ ಅರಣ್ಯ ಭೂಮಿ ನೋಡಿಕೊಳ್ಳುವ ಸಮುದಾಯದ ತಂಡವಿದೆ. ತಂಡದಲ್ಲಿ ಒಂಬತ್ತು ಹುಡುಗರು ಮತ್ತು ಒಬ್ಬ ಹುಡುಗಿ ಇದ್ದಾಳೆ "ಎಂದು ಹೇಳಿದರು.
“ಅರುಣಾಚಲ ಪ್ರದೇಶ ಸರ್ಕಾರವು ತಿಂಗಳಿಗೆ 8000 ರೂ. ಮತ್ತು ಗ್ರಾಮ ಸಮಿತಿಯ 2000 ರೂ.ಗಳನ್ನು ನೀಡುತ್ತದೆ. ಇದು ಆ ತಂಡಕ್ಕೆ ನೀಡುವ ಪ್ರೋತ್ಸಾಹಧನ” ಎಂದರು. ಪ್ರಸ್ತುತ ಬುಗುನ್ ಲಿಯೋಸಿಚ್ಲಾ, ಕೇವಲ ಸಿಂಗ್‌ಚಂಗ್ ಬುಗುನ್ ಗ್ರಾಮ ಸಮುದಾಯ ಕಾಯ್ದಿರಿಸಿದ ಅರಣ್ಯ ಸ್ಥಳದಲ್ಲಿ ಕಂಡು ಬರುತ್ತದೆ.
2006 ರಲ್ಲಿ ಕೇವಲ ಆರು ಪಕ್ಷಿಗಳನ್ನು ಮಾತ್ರ ಗುರುತಿಸಲಾಗಿದ್ದರೂ, ಅರುಣಾಚಲ ಪ್ರದೇಶದ ಬುಗುನ್ ಜನರು ತೋರಿಸಿದ ಆದರ್ಶ ಕಾಳಜಿ ಮತ್ತು ಸಮರ್ಪಣೆಯಿಂದಾಗಿ ಈ ಜಾತಿಗಳ ಸಂಖ್ಯೆ ಪ್ರಸ್ತುತ 100ಕ್ಕೆ ಏರಿದೆ.