ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿ ಇಂದಿಗೆ ಒಂದು ವರ್ಷ. ಚಿತ್ರರಂಗದ ಎಲ್ಲಾ ಹಿರಿಯ, ಕಿರಿಯ ಕಲಾವಿದರೊಂದಿಗೆ ಅಪ್ಪು ಆತ್ಮೀಯರಾಗಿದ್ದರು. ಬೆಳ್ಳಿತೆರೆ ಮೇಲೆ ಮಿಂಚಿ ಮರೆಯಾಗಿರುವ ಪುನೀತ್ ಮಾಡಿದ ಪಾತ್ರಗಳೆಲ್ಲಾ ವಿಭಿನ್ನ.
ಹೌದು, ಕೇವಲ 46 ನೇ ವರ್ಷಕ್ಕೆ ಹೃದಯಾಘಾತದಿಂದ ಅಭಿಮಾನಿಗಳನ್ನು ಅಗಲಿದ ಪುನೀತ್ ಬಾಲ ನಟನಾಗಿ, ನಾಯಕ ನಟನಾಗಿ ವಿಭಿನ್ನ ಅಭಿನಯದ ಮೂಲಕ ಉತ್ತಮ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಕನ್ನಡ ಚಿತ್ರಪ್ರೇಮಿಗಳ ಮನ ಗೆದ್ದಿದ್ದರು. ನಟ, ಗಾಯಕ, ಉತ್ತಮ ಆ್ಯಕ್ಷನ್, ಡ್ಯಾನ್ಸ್ ಮೂಲಕ ಎಲ್ಲಾ ವರ್ಗದ ಪ್ರೇಕ್ಷಕರನ್ನು ಮೆಚ್ಚಿಸುವ ಹಾಗೂ ಸಮಾಜಕ್ಕೆ ಆದರ್ಶವಾಗುವ ಪಾತ್ರಗಳನ್ನೇ ಆಯ್ಕೆ ಮಾಡಿಕೊಂಡು ನಟಿಸಿ ರಂಜಿಸಿದ್ದರು.
ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಮೊದಲ ವರ್ಷದ ಪುಣ್ಯಸ್ಮರಣೆ: ನಮ್ಮ ಅಪ್ಪು ಗಂಧದಗುಡಿಯಲ್ಲಿ ಅರಳಿದ ಒಂದು ಬೆಟ್ಟದ ಹೂವು
ನಾಯಕ ನಟನಾಗಿ ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು 2002 ರಲ್ಲಿ. ‘ಅಪ್ಪು’ ಚಿತ್ರದಿಂದ ಬೆಳ್ಳಿತೆರೆ ಮೇಲೆ ನಾಯಕನಾಗಿ ಪರಿಚಯಗೊಂಡರು. ನಂತರದ 19 ವರ್ಷದ ಸಿನಿ ಪಯಣದಲ್ಲಿ ಇತಿಹಾಸವನ್ನೇ ಸೃಷ್ಟಿಸಿದರು. ಪುನೀತ್ ರಾಜ್‌ಕುಮಾರ್ ಅವರಿಗೆ ಮನೆಯಲ್ಲಿ ಕರೆಯುತ್ತಿದ್ದ ಹೆಸರು 'ಅಪ್ಪು', ಇದೇ ಹೆಸರನ್ನೇ ಅವರು ನಾಯಕರಾಗಿ ಅಭಿನಯಿಸಿದ್ದ ಮೊದಲ ಚಿತ್ರಕ್ಕೂ ಇಡಲಾಯಿತು.
2002ರಲ್ಲಿ ತೆರೆಕಂಡ ಪುರಿ ಜಗನ್ನಾಥ್ ನಿರ್ದೇಶನದ 'ಅಪ್ಪು' ಸಿನಿಮಾ ಮೂಲಕ ನಾಯಕನಾಗಿ ಪುನೀತ್ ಮಿಂಚಲು ಆರಂಭಿಸಿದರು. ಮೊದಲ ಚಿತ್ರದಲ್ಲೇ ಭರ್ಜರಿ ಡ್ಯಾನ್ಸ್ ಮೂಲಕ ಗಮನ ಸೆಳೆದರು. 200 ದಿನಗಳ ನಿರಂತರ ಪ್ರದರ್ಶನ ಕಾಣುವಲ್ಲಿ ಅಪ್ಪು ಚಿತ್ರ ಯಶಸ್ವಿಯಾಯ್ತು. ಬಳಿಕ ನಟಿಸಿದ್ದು ಅಭಿ ಚಿತ್ರದಲ್ಲಿ. ನೈಜ ಕಥೆಯಾಧಾರಿತ ಅಭಿ ಸಿನಿಮಾದಲ್ಲಿ ಕಾಲೇಜ್ ಹುಡುಗನಾಗಿ ಪುನೀತ್ ರಾಜ್‌ಕುಮಾರ್ ಮಿಂಚಿದರು.
ಇದನ್ನೂ ಓದಿ: ಅಪ್ಪು ಮೊದಲ ಪುಣ್ಯ ಸ್ಮರಣೆ.. ಪತಿ ನೆನೆದು ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾವುಕ ಟ್ವೀಟ್
ಬಳಿಕ ತೆರೆಕಂಡ 'ವೀರ ಕನ್ನಡಿಗ', ‘ಮೌರ್ಯ’, ‘ಆಕಾಶ್’, ‘ನಮ್ಮ ಬಸವ’, ‘ಅಜಯ್’, ‘ಅರಸು’ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದವು. ಸಿನಿ ಕೆರಿಯರ್‌ನಲ್ಲಿ ಪುನೀತ್ ರಾಜ್‌ಕುಮಾರ್ ತರಹೇವಾರಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ‘ಬಿಂದಾಸ್’, ‘ವಂಶಿ’, ‘ರಾಜ್ ದಿ ಶೋಮ್ಯಾನ್’, ‘ರಾಮ್’, ‘ಪೃಥ್ವಿ’, ‘ಜಾಕಿ’, ‘ಹುಡುಗರು’, ‘ಪರಮಾತ್ಮ’, ‘ಅಣ್ಣಾ ಬಾಂಡ್’, ‘ಯಾರೇ ಕೂಗಾಡಲಿ’, ‘ನಿನ್ನಂದಲೇ’, ‘ರಣವಿಕ್ರಮ’, ‘ಚಕ್ರವ್ಯೂಹ’, ಚಿತ್ರಗಳಲ್ಲಿ ಭಿನ್ನ ವಿಭಿನ್ನ ಪಾತ್ರಗಳಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯಿಸಿದ್ದಾರೆ.
ಕಿರುತೆರೆಯಲ್ಲೂ ಮಿಂಚು: ಬೆಳ್ಳಿತೆರೆ ಮಾತ್ರವಲ್ಲ ಕಿರುತೆರೆಯಲ್ಲೂ ಪುನೀತ್ ರಾಜ್‌ಕುಮಾರ್ ತಮ್ಮದೇ ಆದ ಛಾಪು ಮೂಡಿಸಿದ್ದರು. ‘ಕನ್ನಡದ ಕೋಟ್ಯಾಧಿಪತಿ’ ಮತ್ತು ‘ಫ್ಯಾಮಿಲಿ ಪವರ್’ ಕಾರ್ಯಕ್ರಮಗಳನ್ನು ಪುನೀತ್ ನಡೆಸಿಕೊಟ್ಟಿದ್ದರು. ಕೆಎಂಎಫ್ ಸೇರಿದಂತೆ ಕೆಲವು ಬ್ರ್ಯಾಂಡ್‌ಗಳಿಗೆ ಪುನೀತ್ ರಾಜ್‌ಕುಮಾರ್ ಪ್ರಚಾರ ರಾಯಭಾರಿ ಕೂಡ ಆಗಿದ್ದರು.
ಇದನ್ನೂ ಓದಿ: ಅಪ್ಪುಗೆ ಕರ್ನಾಟಕ ರತ್ನ ಪ್ರದಾನ ಸಮಾರಂಭದಲ್ಲಿ ರಜನೀಕಾಂತ್, ಜೂ ಎನ್ಟಿಆರ್ ಭಾಗಿ: ಸಚಿವ ಅಶೋಕ್
2009 ರಲ್ಲಿ ತೆರೆಕಂಡ ಪೃಥ್ವಿ ಸಿನಿಮಾದಲ್ಲಿ ಬಳ್ಳಾರಿ ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಹೋರಾಡುವ ಜಿಲ್ಲಾಧಿಕಾರಿ ಪಾತ್ರದಲ್ಲಿ ಪುನೀತ್ ಮಿಂಚಿದ್ದರು. ಅಲ್ಲಿಯವರೆಗೂ ಕೌಟುಂಬಿಕ ಹಾಗೂ ಮನರಂಜನೆಯ ಆಧಾರಿತ ಸಿನಿಮಾ ನೀಡುತ್ತ ಬಂದಿದ್ದ ಅಪ್ಪು, ಒಂದು ಸಾಮಾಜಿಕ ಕಳಕಳಿ ವ್ಯಕ್ತಪಡಿಸುವ ಪಾತ್ರಕ್ಕೆ ಜೀವ ತುಂಬಿದ್ದರು. ಇದಾದ ಬಳಿಕ 2015 ರಲ್ಲಿ ತೆರೆಗೆ ಬಂದ 'ಮೈತ್ರಿ' ಚಿತ್ರ ಸಹ ಸಾಕಷ್ಟು ಸಮಾಜದ ತಪ್ಪನ್ನು ತಿದ್ದುವ ಪಾತ್ರವನ್ನು ನೀಡಿತು. ಇದರಲ್ಲಿ ವೈದ್ಯಕೀಯ ಕ್ಷೇತ್ರದ ಅಕ್ರಮ ಬಯಲಿಗೆಳೆಯುವ ಪಾತ್ರ ನಿರ್ವಹಿಸಿದ್ದರು.
ಕೊನೆಯ ದಿನಗಳಲ್ಲಿ ನಟಿಸಿದ್ದ ಯುವರತ್ನ ಹಾಗೂ ಜೇಮ್ಸ್ ಚಿತ್ರಗಳು ಡ್ರಗ್ಸ್ ಮಹಾಮಾರಿ ವಿರುದ್ಧ ಹೋರಾಡುವ ಉದಾತ್ತ ಪಾತ್ರದಲ್ಲಿ ನಟಿಸುವ ಅವಕಾಶ ಮಾಡಿಕೊಟ್ಟಿತ್ತು. ಚಿತ್ರದಲ್ಲಿ ಪೊಲೀಸ್ ಆಗಿ ಸಮಾಜ ತಿದ್ದುವ ಪಾತ್ರಗಳನ್ನು ಅಪ್ಪು ಮಾಡಿದ್ದರು.
ಇದನ್ನೂ ಓದಿ: ನಟನೆಗೂ ಸೈ ಗಾಯನಕ್ಕೂ ಜೈ ಅಂದಿದ್ದ ಪುನೀತ್: 'ಬಾನ ದಾರಿಯಲ್ಲಿ ಜಾರಿ ಹೋದ' ಅಪ್ಪು ಹಾಡಿದ ಬೆಸ್ಟ್ ಹಾಡುಗಳಿವು
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ವಿಭಿನ್ನ ಪಾತ್ರಗಳಲ್ಲಿ ನಟಿಸುವುದೆಂದರೆ ತುಂಬಾ ಇಷ್ಟ. ಒಬ್ಬ ನಟನಾಗಿ ಭಿನ್ನ ಪಾತ್ರಗಳಲ್ಲಿ ಅಭಿನಯಿಸಲು ಆಸಕ್ತಿ ಇರುತ್ತದೆ ಎಂದು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಹೇಳಿದ್ದರು. ಜೊತೆಗೆ ಇದೇ ಸಂದರ್ಭದಲ್ಲಿ ಹುಚ್ಚನ ಪಾತ್ರ, ವಿಲನ್ ಮತ್ತು ಎಕ್ಸ್‌ಪೆರಿಮೆಂಟಲ್ ಪಾತ್ರಗಳಲ್ಲಿ ಅಭಿನಯಿಸುವ ಆಸಕ್ತಿ ಇರುವುದಾಗಿ ತಿಳಿಸಿದ್ದರು.
ಬಾಲ ನಟನಾಗಿ, ನಾಯಕ ನಟನಾಗಿ ಇದುವರೆಗೂ ಪುನೀತ್ ನಟಿಸಿರುವ ಸಿನಿಮಾಗಳ ಸಂಖ್ಯೆ ಸುಮಾರು 44. ಕೆಲವು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎರಡು ಸಿನಿಮಾಗಳನ್ನು ಪಿಆರ್‌ಕೆ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸಿದ್ದಾರೆ. ಪುನೀತ್ ನಿಧನದ ನಂತರ ಅಭಿನಯಿಸಿದ್ದ ಎರಡು ಚಿತ್ರಗಳು ಬಿಡುಗಡೆಯಾಗಿವೆ. ಒಂದು ಚಿತ್ರ ಆರಂಭವಾಗದೇ ನಿಂತಿದೆ. 90ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಆಕ್ಷನ್, ಮೆಲೋಡ್ರಾಮಾ, ಸಸ್ಪೆನ್ಸ್ ಹೀಗೆ ವಿಭಿನ್ನ ಬಗೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಲಕ್ಕಿ ಮ್ಯಾನ್' ಸಿನಿಮಾದಲ್ಲಿ ಅಪ್ಪು ದೇವರ ರೂಪದಲ್ಲಿ ಗೋಚರಿಸಿದ್ದಾರೆ. ಚಿತ್ರವನ್ನು ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ಮಗುವಾಗಿದ್ದಾಗಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅಪ್ಪು.. ಒಂದೇ ಒಂದು ಚಿತ್ರದಲ್ಲಿ ರಾಜ್ಕುಮಾರ್ಗೆ ಅಳಿಯನಾಗಿದ್ದ ಪುನೀತ್!