ಕೊಚ್ಚಿ (ಕೇರಳ): ಚಲನಚಿತ್ರವೊಂದರ ಬಗ್ಗೆ ನಕಾರಾತ್ಮಕ ವಿಮರ್ಶೆ (negative review) ಮಾಡಿದ್ದಕ್ಕೆ ಕೇರಳ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಹೊಸ ಚಲನಚಿತ್ರಗಳು ಬಿಡುಗಡೆಯಾದಾಗ ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರದ ಬಗ್ಗೆ ನಕಾರಾತ್ಮಕವಾಗಿ ಬಿಂಬಿಸುವ ಪಟ್ಟಭದ್ರ ಹಿತಾಸಕ್ತಿಗಳ ಬಗ್ಗೆ ಸೂಕ್ಷ್ಮವಾಗಿ ತನಿಖೆ ನಡೆಸುವಂತೆ ಕೇರಳ ಉಚ್ಚ ನ್ಯಾಯಾಲಯವು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶಿಸಿದ ಎರಡು ವಾರಗಳ ನಂತರ, ಎರ್ನಾಕುಲಂ ಸೆಂಟ್ರಲ್ ಪೊಲೀಸರು ಬುಧವಾರ ಈ ಸಂಬಂಧ ಮೊದಲ ಪ್ರಕರಣ ದಾಖಲಿಸಿದ್ದಾರೆ ಮತ್ತು ಒಂಬತ್ತು ಜನರ ವಿರುದ್ಧ ಆರೋಪ ಹೊರಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್ಬುಕ್, ಯೂಟ್ಯೂಬ್ ಮತ್ತು ಇತರ ಏಳು ಮಂದಿಯನ್ನು ಆರೋಪಿಯನ್ನಾಗಿ ಹೆಸರಿಸಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಚಲನಚಿತ್ರವೊಂದರ ಬಗ್ಗೆ ನೆಗೆಟಿವ್ ರಿವೀವ್ ಮಾಡಿದ್ದಕ್ಕೆ ಎಫ್ಐಆರ್ ದಾಖಲಾಗುತ್ತಿರುವುದು ದೇಶದಲ್ಲಿ ಇದೇ ಪ್ರಥಮ ಬಾರಿ ಅನಿಸುತ್ತದೆ.
ಇತ್ತೀಚೆಗೆ ಬಿಡುಗಡೆಯಾದ ತಮ್ಮ ಮಲಯಾಳಂ ಚಿತ್ರ "ರಾಹೆಲ್ ಮಕಾನ್ ಕೋರಾ" ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ನಕಾರಾತ್ಮಕ ವಿಮರ್ಶೆಗಳು ಬರುತ್ತಿರುವುದನ್ನು ಕಂಡ ನಂತರ ಚಲನಚಿತ್ರ ನಿರ್ದೇಶಕ ಉಬೈನಿ ಇಬ್ರಾಹಿಂ ನೀಡಿದ ದೂರಿನ ಆಧಾರದ ಮೇಲೆ ಎರ್ನಾಕುಲಂ ಸೆಂಟ್ರಲ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ವ್ಲಾಗರ್ಗಳ ಬೇಕಾಬಿಟ್ಟಿ ವರ್ತನೆಯಿಂದಾಗಿ ತಮ್ಮ ಚಿತ್ರದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು "ಅರೋಮಲಿಂಟೆ ಅದ್ಯತೆ ಪ್ರಾಣಾಯಂ" ಚಿತ್ರದ ನಿರ್ದೇಶಕ ಮುಬೀನ್ ರೌಫ್ ಅವರು ಈ ತಿಂಗಳ ಆರಂಭದಲ್ಲಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಹೈಕೋರ್ಟ್ ವಿಚಾರಣೆ ಆರಂಭಿಸಿತ್ತು.
ವಿಚಾರಣೆಯ ಸಮಯದಲ್ಲಿ, ವಿಮರ್ಶೆಗಳಲ್ಲಿ ನಿಯಂತ್ರಣ ಮತ್ತು ಸಮತೋಲನಗಳು ಇರಬೇಕು ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ ಕಾನೂನುಬಾಹಿರ ಮತ್ತು ದುರುದ್ದೇಶಪೂರಿತ 'ರಿವೀವ್ ಬಾಂಬಿಂಗ್' ಸೇರಿದಂತೆ ಅಂಥ ಚಟುವಟಿಕೆಗಳ ವಿರುದ್ಧ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯು ದೂರು ದಾಖಲಿಸಬಹುದೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಕಾರಿ ವಕೀಲರ ಮೂಲಕ ತನಗೆ ತಿಳಿಸುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿತ್ತು.
ಆದಾಗ್ಯೂ ಸುಲಿಗೆ ಮತ್ತು ಬ್ಲ್ಯಾಕ್ಮೇಲ್ ಮಾಡಲು ಮಾತ್ರ ಮಾಡಲಾದ ಪ್ರೇರಿತ ಮತ್ತು ದುರುದ್ದೇಶಪೂರಿತ ವಿಮರ್ಶೆಗಳ ವಿಚಾರದಲ್ಲಿ ಮಾತ್ರ ಪ್ರತಿಕ್ರಿಯೆ ಕೋರಲಾಗುತ್ತಿದೆ ಎಂಬುದನ್ನು ರಾಜ್ಯ ಪೊಲೀಸ್ ಮುಖ್ಯಸ್ಥರು ನಿರ್ದಿಷ್ಟವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿತ್ತು. ವಿಶ್ವಾಸಾರ್ಹ ವಿಮರ್ಶೆಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ತಿಳಿಸಿತ್ತು.
ಇದನ್ನೂ ಓದಿ: ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪ : ನಟ ದರ್ಶನ್, ಜಗ್ಗೇಶ್ ಸೇರಿ ಹಲವರ ವಿರುದ್ಧ ದೂರು..