ಕನ್ನಡ ಚಿತ್ರರಂಗದಲ್ಲಿ ಗಾಡ್ ಫಾದರ್ ಇಲ್ಲದೇ, ಸಕ್ಸಸ್ ಆದ ಸೆಲೆಬ್ರಿಟಿಗಳು ಸಾಕಷ್ಟು ಜನ ಇದ್ದಾರೆ. ಇಂತಹವರ ಸಾಲಿನಲ್ಲಿ 'ರಾಮಾ ರಾಮಾ ರೇ, ಒಂದಲ್ಲಾ ಎರಡಲ್ಲಾ' ಎಂಬ ವಿಭಿನ್ನ ಸಿನಿಮಾಗಳನ್ನು ಮಾಡಿ, ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡ ನಿರ್ದೇಶಕ ಸತ್ಯಪ್ರಕಾಶ್ ಕೂಡ ಒಬ್ಬರು. ಸದ್ಯ ಓಟಿಟಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ 'ಮ್ಯಾನ್ ಆಫ್ ದಿ ಮ್ಯಾಚ್' ಸಿನಿಮಾ ನಿರ್ದೇಶನ ಮಾಡಿರುವ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ 'ಈಟಿವಿ ಭಾರತ'ದೊಂದಿಗೆ ತಮ್ಮ ಸಿನಿಮಾ ಜರ್ನಿಯ ಕೆಲ ಸಂಗತಿಗಳನ್ನು ಹಂಚಿಕೊಂಡರು.
ಮೂಲತಃ ಕಡೂರಿನವರಾದ ಇವರು ಸಿನಿಮಾ ಇಂಡಸ್ಟ್ರಿಗೆ ಬರಲು ಚಿತ್ರಬ್ರಹ್ಮ 'ಪುಟ್ಟಣ್ಣ ಕಣಗಾಲ್' ಸ್ಫೂರ್ತಿಯಂತೆ. ಭವಿಷ್ಯದಲ್ಲಿ ಕ್ರಿಕೆಟ್ ಆಟಗಾರನಾಗಲು ಕನಸು ಕಂಡಿದ್ದ ಇವರಿಗೆ ಸಿನಿಮಾ ಮೇಲೆ ವ್ಯಾಮೋಹ ಬರಲು ಅವರ ತಂದೆ ಹಾಗೂ ಅವರ ತಾತ ಪ್ರೇರಣೆ ನೀಡಿದ್ದರಂತೆ. ಒಂದು ದಿನ ಸತ್ಯ ಪ್ರಕಾಶ್ ಅವರ ತಂದೆ, ತಂದೆ-ತಾಯಿಯನ್ನು ಪುಟ್ಟಣ್ಣ ಅವರ ಸಿನಿಮಾ ಹಾಕಿದ್ದಾರೆ ಎಂದು ಹೇಳಿ ಕರೆದುಕೊಂಡು ಬಂದಿದ್ದಂತೆ. ಆಗ ಸತ್ಯ ಪ್ರಕಾಶ್ ಪುಟ್ಟಣ್ಣ ಅಂದ್ರೆ ಯಾರು? ಎಂದು ಕೇಳಿದಾಗ ಒಂದು ಸಿನಿಮಾ ಮಾಡಲು ಡೈರೆಕ್ಟರ್ ಕಾರಣ ಎಂದಿದ್ದರಂತೆ. ಆಗ ಸತ್ಯ ಪ್ರಕಾಶ್ಗೆ ತೆರೆ ಹಿಂದೆ ಇರುವ ನಿರ್ದೇಶಕನಿಗೆ ಅಷ್ಟೊಂದು ಪವರ್ ಇದೆಯಾ ಎಂಬ ಅರಿವಾಗಿತ್ತಂತೆ.
ಪಿಯುಸಿ ಫೇಲ್ ಆದ ನಾನು ತಂದೆ ಕೆಲಸ ಮಾಡುತ್ತಿದ್ದ ಕಾಫಿ ಪುಡಿ ಅಂಗಡಿಯಲ್ಲಿ ಒಂದು ವರ್ಷ ಖಾಲಿ ಕುಳಿತಿದ್ದೆ. ಆ ವೇಳೆ ಸಾಕಷ್ಟು ಪುಸ್ತಕಗಳನ್ನು ಓದುತ್ತಿದ್ದೆ. ಅಲ್ಲಿ ಓದಿದ್ದು, ಅಂಗಡಿಗೆ ಬರುತ್ತಿದ್ದ ಜನರ ಅನುಭವಗಳು ನನ್ನ ಬದಲಾವಣೆಗೆ ಕಾರಣವಾಯಿತು. ಬಳಿಕ ಡಿಪ್ಲೊಮಾಗೆ ಸೇರಿಕೊಂಡಾಗ ನನ್ನ ಐಡಿಯಾಗಳು ಹಾಗೂ ಬರವಣಿಗೆಗಳನ್ನು ನೋಡಿ ಕೆಲವರು ನೀನು ಸಿನಿಮಾ ಮಾಡು ಅಂತಾ ಪ್ರೇರಪಿಸಿದರು.
ಸಿನಿಮಾ ಇಂಡಸ್ಟ್ರಿಗೆ ಬರಲು ಎರಡು ವರ್ಷ ಬೇಕಾಯಿತು. ಉಪೇಂದ್ರ ಜೊತೆ ಕೆಲಸ ಮಾಡುವ ಅವಕಾಶ ಸಿಗುತ್ತದೆ ಎಂದು ಅವರ ಮನೆಯ ಮುಂದೆ ಸತತ 8 ತಿಂಗಳು ಕಾದಿದ್ದೇನೆ. ಆದರೆ ಅದು ಆಗಲಿಲ್ಲ. ಆಗ ವಿ. ಮನೋಹರ್ ಮೊದಲು ಅವಕಾಶ ನೀಡಿದರು. ಅಲ್ಲಿ ಸಿನಿಮಾ ಎಂದರೆ ಏನು?, ಎಡಿಟಿಂಗ್, ಸಾಹಿತ್ಯ ಎಲ್ಲವನ್ನೂ ಕಲಿತುಕೊಂಡೆ. ಆ ಸಮಯದಲ್ಲಿ ವಿ.ಮನೋಹರ್ ಸಹಾಯದಿಂದ, ಎಸ್.ಮಹೇಂದರ್ ಅವರ ಪರಿಚಯವಾಯಿತು. ಬಳಿಕ ನಾಗಾಭರಣ ಅವರ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಅವರ ಜತೆ 5 ವರ್ಷ ಕೆಲಸ ಮಾಡಿ ಕಥೆಗಾರನಾಗಿ ಗುರುತಿಸಿಕೊಂಡೆ. ಈ ಆತ್ಮವಿಶ್ವಾಸದಿಂದ ಸಿನಿಮಾ ನಿರ್ದೇಶನ ಮಾಡಲು ರೆಡಿಯಾದೆ. ಆಗ ಶುರುವಾಗಿದ್ದೇ 'ರಾಮಾ ರಾಮಾ ರೇ' ಸಿನಿಮಾ ಎಂದು ನಿರ್ದೇಶಕ ಸತ್ಯಪ್ರಕಾಶ್ ನೆನಪಿಸಿಕೊಂಡರು.
ಪುನೀತ್ ರಾಜ್‍ಕುಮಾರ್ ಅವರರಿಗೆ ಸಿನಿಮಾ ನಿರ್ದೇಶನ ಮಾಡಲು ಅವಕಾಶ ಸಿಕ್ಕಿತ್ತು. ಆದರೆ ನನ್ನ ಕನಸು ಈಡೇರಲಿಲ್ಲ. ಸಿನಿಮಾ ಬಗ್ಗೆ ಅವರಿಗಿದ್ದ ವ್ಯಾಮೋಹ ನೋಡಿ ನಾನೇ ಶಾಕ್ ಆಗಿದ್ದೆ. ಕನ್ನಡ ಚಿತ್ರರಂಗವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಬೇಕು ಎಂಬುವುದು ಅವರ ಆಸೆ. ಅದಕ್ಕೆ ಬೇಕಾಗುವ ಹೈ-ಟೆಕ್ನಾಲಜಿ ಕ್ಯಾಮರಾ, ಕಲರ್ ಕರೆಕ್ಷನ್ ಹೀಗೆ ಸಿನಿಮಾ ತಂತ್ರಜ್ಞಾನದ ಬಗ್ಗೆ ಹೆಚ್ಚು ಒತ್ತು ಕೊಡುತ್ತಿದ್ದರು. ಹಾಗೇ ಹೊಸ ನಿರ್ದೇಶಕರು, ಹೊಸ ನಟರಿಗೆ ಅವಕಾಶ ಕೊಡಬೇಕು ಅನ್ನೋದು ಅಪ್ಪು ಅವರ ದೊಡ್ಡ ಕನಸಾಗಿತ್ತು. ಇಂತಹ ಮಹಾನ್ ನಟನಿಗೆ ನಿರ್ದೇಶನ ಮಾಡುವ ಅವಕಾಶವನ್ನು ಆ ದೇವರು ಕೊಡಲಿಲ್ಲ ಎಂದು ಸತ್ಯ ಪ್ರಕಾಶ್ ಭಾವುಕರಾದರು.
ಇದನ್ನೂ ಓದಿ: ಪವರ್ ಸ್ಟಾರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ನಿರ್ದೇಶಕ ಸತ್ಯ ಪ್ರಕಾಶ್