ಆಲಿಯಾ ಭಟ್ ಅಭಿನಯದ 'ಡಾರ್ಲಿಂಗ್ಸ್' ಸಿನಿಮಾ ಸಂಕಷ್ಟಕ್ಕೆ ಸಿಲುಕಿದೆ. ಈ ಸಿನಿಮಾದಲ್ಲಿ ಗಂಡಸರ ಮೇಲಿನ ದೌರ್ಜನ್ಯವನ್ನು ಪ್ರಚೋದಿಸುವಂತಹ ದೃಶ್ಯಗಳು ಇವೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಹಾಗಾಗಿ ಈ ಸಿನಿಮಾವನ್ನು ಬಹಿಷ್ಕಾರ ಮಾಡಲು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದೆ. ನೆಟ್ಫ್ಲಿಕ್ಸ್ನಲ್ಲಿ ಆ. 5ರಂದು ಈ ಸಿನಿಮಾ ಬಿಡುಗಡೆಯಾಗಿದೆ. ರಿಲೀಸ್ ಹೊಸ್ತಿಲಿನಲ್ಲಿ #Boycott Darlings, #Boycott Alia Bhatt ಹ್ಯಾಶ್ ಟ್ಯಾಗ್ಗಳು ಟ್ರೆಂಡ್ ಆಗಿವೆ.
ಹಿಂದಿ ಚಿತ್ರರಂಗದ ಸ್ಥಿತಿ ಸದ್ಯ ಕಷ್ಟದಲ್ಲಿದೆ. ಜನರು ಚಿತ್ರಮಂದಿರಕ್ಕೆ ಬಂದು ಬಾಲಿವುಡ್ ಸಿನಿಮಾಗಳನ್ನು ನೋಡಲು ಹಿಂದೇಟು ಹಾಕುತ್ತಿದ್ದಾರೆ. ನೇರವಾಗಿ ಒಟಿಟಿ ಮೂಲಕ ರಿಲೀಸ್ ಮಾಡಿದರೆ ಉತ್ತಮ ಎಂಬುದು ಕೆಲವು ನಿರ್ಮಾಪಕರ ಅಭಿಪ್ರಾಯ. ಅದೇ ರೀತಿ ಡಾರ್ಲಿಂಗ್ಸ್ ಕೂಡ ಒಟಿಟಿ ಮೂಲಕ ಬಿಡುಗಡೆ ಆಗಿದೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ಅದನ್ನು ಕಂಡು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತನಗೆ ಹಿಂಸೆ ನೀಡಿದ ಗಂಡನನ್ನು ಕಿಡ್ನಾಪ್ ಮಾಡಿ, ಆತನಿಗೂ ಅದೇ ರೀತಿಯಲ್ಲಿ ಹಿಂಸೆ ನೀಡುವ ಮೂಲಕ ಸೇಡು ತೀರಿಸಿಕೊಳ್ಳುವ ಪತ್ನಿಯ ಕಥೆ ಈ ಸಿನಿಮಾದಲ್ಲಿ ಇದೆ. ಗಂಡನಿಗೆ ಮನಬಂದಂತೆ ಥಳಿಸುವ ಹೆಂಡತಿಯಾಗಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ಗಂಡಸರ ಮೇಲಿನ ದೌರ್ಜನ್ಯವನ್ನು ಪ್ರಚೋದಿಸಲಾಗುತ್ತಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.
ಜಸ್ಮೀತ್ ಕೆ ರೀನ್ ನಿರ್ದೇಶನದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ, ಕೆಲವು ನೆಟಿಜನ್‌ಗಳು ಚಿತ್ರವನ್ನು ಬಹಿಷ್ಕರಿಸಲು ಟ್ವೀಟ್ ಮಾಡುತ್ತಿದ್ದಾರೆ. ಇದರೊಂದಿಗೆ #Boycott Alia Bhatt ಎಂಬ ಹ್ಯಾಶ್ ಟ್ಯಾಗ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.
ಟೀಸರ್ ಮತ್ತು ಟ್ರೇಲರ್ ಪೋಸ್ಟರ್ ಗಳಿಂದ ಸೂಪರ್ ಕ್ರೇಜ್ ಗಿಟ್ಟಿಸಿಕೊಂಡಿರುವ ಈ ಸಿನಿಮಾದ ಪ್ರಚಾರ ಚಿತ್ರದಲ್ಲಿ ಆಲಿಯಾ ತನ್ನ ಪತಿಯನ್ನು ತನ್ನ ತಾಯಿಯೊಂದಿಗೆ ಕುರ್ಚಿಗೆ ಕಟ್ಟಿ ಹಾಕಿದ ರೀತಿಗೆ ಕೆಲ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದು, ಚಿತ್ರವನ್ನು ಬಹಿಷ್ಕರಿಸುವಂತೆ ಟ್ವೀಟ್ ಮಾಡುತ್ತಿದ್ದಾರೆ. ಕೌಟುಂಬಿಕ ಹಿಂಸೆಯನ್ನು ಏಕೆ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಆಲಿಯಾಗೆ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ಆಲಿಯಾ ಭಟ್ ಜೊತೆಗೆ ಶೆಫಾಲಿ ಶಾ, ವಿಜಯ್ ವರ್ಮಾ ಮತ್ತು ರೋಷನ್ ಮ್ಯಾಥ್ಯೂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶಾಲ್ ಭಾರದ್ವಾಜ್ ಸಂಗೀತ ಸಂಯೋಜಿಸಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಮತ್ತು ಎಟರ್ನಲ್ ಸನ್ಶೈನ್ ಪ್ರೊಡಕ್ಷನ್ ನಿರ್ಮಿಸಿದೆ.
ಇದನ್ನೂ ಓದಿ: ಡಾರ್ಕ್ ಕಾಮಿಡಿ 'ಡಾರ್ಲಿಂಗ್ಸ್' ನಲ್ಲಿ ಆಲಿಯಾ ಮಿಂಚಿಂಗ್.. ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ