ರಾಮನಗರ: ನಾನು ಇಂತಹ ರೈಡ್ ಅನ್ನು ಈ ಹಿಂದೆ ಎಲ್ಲಿಯೂ ನೋಡಿಲ್ಲ. ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಆಟಗಳನ್ನು ಪರಿಚಯಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇಡೀ ದೇಶದಲ್ಲೇ ಉತ್ತಮ ಮನೋರಂಜನಾ ಪಾರ್ಕ್ಗಳಲ್ಲೇ ವಂಡರ್ ಲಾ ಮುಂಚೂಣಿಯಲ್ಲಿದೆ ಎಂದು ನಟಿ ಮೇಘನಾ ರಾಜ್ ತಿಳಿಸಿದ್ದಾರೆ.
ಬಿಡದಿಯ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ಗೆ ಭೇಟಿ ನೀಡಿ ಹೊಸ ಗೇಮ್ ಸ್ಕೈ ಟಿಲ್ಟ್ ಆಟಕ್ಕೆ ಚಾಲನೆ ಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮನೋರಂಜನೆ ಎಂದರೆ ಮೊದಲು ಕಣ್ಣ ಮುಂದೆ ಬರುವುದು ವಂಡರ್ ಲಾ. ಮನೋರಂಜನೆ ಸುರಕ್ಷತೆಗೆ ಇಲ್ಲಿ ಮೊದಲ ಆದ್ಯತೆ. ಇಡೀ ಕುಟುಂಬ ಬಂದು ಇಲ್ಲಿ ಸಮಯ ಕಳೆಯಬಹುದಾಗಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಆಟಗಳನ್ನು ಪರಿಚಯಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಪ್ರತಿಯೊಂದು ಆಟವನ್ನೂ ಕೂಡ ಯಾವುದೇ ಭಯವಿಲ್ಲದೇ ಆಡಬಹುದು ಎಂದರು.
ಇದೇ ಸಂದರ್ಭದಲ್ಲಿ ವಂಡರ್ ಲಾ ಸಂಸ್ಥೆಯ ಎಂ.ಡಿ ಅರುಣ್ ಮಾತನಾಡಿ, ಇದು ನಾವೇ ವಿನ್ಯಾಸಗೊಳಿಸಿದ ಮೊದಲ ಗೇಮ್. ಶಿಕಾಗೋನಂತಹ ದೊಡ್ಡ ನಗರಗಳಲ್ಲಿ ಮಾತ್ರ ಇಂತಹ ರೈಡ್ ಇತ್ತು. ಇಂದು ಇಲ್ಲಿಯೂ ಸಾಧ್ಯವಾಗಿದೆ. ಬೆಂಗಳೂರು ವಂಡರ್ ಲಾ ಪಾರ್ಕ್ನಲ್ಲಿ ಮಾತ್ರ ಇದೆ. ಶಾಲಾ ಮಕ್ಕಳಿಗೆ ಶೇ. 35ರಿಂದ 40 ರಷ್ಟು ರಿಯಾಯಿತಿ ನೀಡುತ್ತಿದ್ದೇವೆ. ಸರ್ಕಾರಿ ಶಾಲೆ ಮಕ್ಕಳಿಗೆ ಶೇ. 49ವರೆಗೆ ರಿಯಾಯಿತಿ ನೀಡುತ್ತಿದ್ದೇವೆ ಎಂದರು. ಹಾಗೆಯೇ ಇದೇ 24ರಿಂದ ಜ. 1ರವೆಗೆ ವಂಡರ್ ಲಾ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾತ್ರಿ 8ರವರೆಗೂ ಪಾರ್ಕ್ನಲ್ಲಿರಲು ಅವಕಾಶ ಇದೆ. 31ರಂದು ಡಿ.ಜೆ. ಕಾರ್ಯಕ್ರಮ ಇರಲಿದೆ ಎಂದು ತಿಳಿಸಿದರು.
ಇದಲ್ಲದೇ ಮೂರನೇ ತ್ರೈಮಾಸಿಕದಲ್ಲೂ ಉತ್ತಮ ಬ್ಯುಸಿನೆಸ್ ಆಗುತ್ತಿದೆ. ಬೆಂಗಳೂರು, ಹೈದರಾಬಾದ್, ಕೊಚ್ಚಿ ಉತ್ತಮವಾಗಿದೆ. ಜನತೆ ಎರಡು ವರ್ಷ ಮನೆಯಲ್ಲೇ ಕುಳಿತಿದ್ದರು. ಸದ್ಯ ಹೊರಗೆ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಚೆನ್ನೈನಲ್ಲಿ- 400 ಕೋಟಿ ಹಾಗೂ ಭುವನೇಶ್ವರದಲ್ಲಿ- 120 ಕೋಟಿ ವೆಚ್ಚದಲ್ಲಿ ಹೊಸ ಪಾರ್ಕ್ ನಿರ್ಮಾಣ ಮಾಡಲಾಗುವುದು. ಮುಂದಿನ ಎರಡು ವರ್ಷದಲ್ಲಿ ಇವು ಕಾರ್ಯಾರಂಭ ಮಾಡಲಿದೆ ಎಂದು ಇದೇ ವೇಳೆ ತಿಳಿಸಿದರು.
ದರ್ಶನ್ ಮೇಲಿನ ಕೃತ್ಯಕ್ಕೆ ಖಂಡನೆ: ನಟ ದರ್ಶನ್ ಮೇಲೆ ನಡೆದ ಕೃತ್ಯ ನಿಜಕ್ಕೂ ಆಘಾತಕಾರಿ. ಆ ಕೃತ್ಯ ಎಸಗಿದವರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ನಟರ ನಡುವೆ ನಿಜವಾಗಿಯೂ ಯಾವುದೇ ವಾರ್ ನಡೆದಿಲ್ಲ. ಆದರೆ ಅವರ ಹೆಸರಿನಲ್ಲಿ ಕೆಲವರು ಈ ರೀತಿ ವರ್ತನೆ ತೋರುವುದು ಆಘಾತಕಾರಿ. ಕಲಾವಿದರು ತಮ್ಮ ಸಿನಿಮಾ ಪ್ರಚಾರಕ್ಕಾಗಿ ಅಲ್ಲಲ್ಲಿ ಹೋಗುತ್ತಿರುತ್ತೇವೆ. ಅಭಿಮಾನಿಗಳ ಇಂತಹ ಅತಿರೇಕದ ವರ್ತನೆಯಿಂದ ನಮಗೆ ಆಘಾತ ಆಗುತ್ತದೆ. ಹೀಗೆಯೇ ಆದರೆ ಅವರ ಜೊತೆ ಬೆರೆಯುವುದು ಕಷ್ಟವಾಗುತ್ತದೆ ಎಂದರು. ಸದ್ಯ ಪನ್ನಾಗಾಭರಣ ಅವರ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸಿದ್ದು, ಬಿಡುಗಡೆಗೆ ಸಿದ್ಧವಾಗುತ್ತಿದೆ. ಮುಂದೆಯೂ ಅನೇಕ ಸಿನಿಮಾಗಳಲ್ಲಿ ಅಭಿನಯಿಸಲಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ದರ್ಶನ್ ಮೇಲಿನ ಕೃತ್ಯಕ್ಕೆ ವ್ಯಾಪಕ ಖಂಡನೆ: ಕೆಟ್ಟ ಪದ ಬಳಸುವವರ ಟ್ವಿಟರ್ ಖಾತೆ ಬ್ಯಾನ್ ಮಾಡಲು ರಮ್ಯಾ ಮನವಿ