ಕನ್ನಡ ಚಿತ್ರರಂಗದಲ್ಲಿ ಬಯೋಫಿಕ್ ಸಿನಿಮಾಗಳನ್ನ ಮಾಡಿದಾಗ ಸತ್ಯಾ ಸತ್ಯತೆಗಳನ್ನ ತೆರೆ ಮೇಲೆ ಹೇಳೋದಿಕ್ಕೆ ನಿರ್ದೇಶಕನಿಗೆ ದೊಡ್ಡ ಸವಾಲು ಆಗಿರುತ್ತೆ. ಆದರೆ, ಯಶಸ್ವಿ ಉದ್ಯಮಿ ವಿಜಯ್ ಸಂಕೇಶ್ವರ್ ಅವರ ಜೀವನ ಆಧರಿಸಿ ಬಂದ ವಿಜಯಾನಂದ ಸಿನಿಮಾ ನಿಜಕ್ಕೂ ನೈಜವಾಗಿ ಮೂಡಿ ಬಂದಿದೆ.
ವಿಶ್ವದಾದ್ಯಂತ 1200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇಂದು ಚಿತ್ರ ಬಿಡುಗಡೆ ಆಗಿದೆ. ಸಿನಿಮಾ ನೋಡಿದ ಚಿತ್ರರಂಗದವರು ಹಾಗೂ ಸಿನಿಮಾ ಪ್ರೇಮಿಗಳು ವಿಜಯಾನಂದ ರಿಯಲ್ ಕಥೆಗೆ ಮನಸೋತಿದ್ದಾರೆ. ನಿರ್ದೇಶಕಿ ರಿಷಿಕಾ ಶರ್ಮಾ, ವಿಜಯ್ ಸಂಕೇಶ್ವರ್ ಲೈಫ್ ಸ್ಟೋರಿಯನ್ನ ಬಹಳ ಅಚ್ವು ಕಟ್ಟಾಗಿ ತೆರೆ ಮೇಲೆ ತಂದಿದ್ದಾರೆ.
ಅಪ್ಪನಿಗೆ ಮಗ ಟ್ರಾವೆಲ್ಸ್ ಉದ್ಯಮ ನಡೆಸೋದು ಇಷ್ಟವಿಲ್ಲ. ಮಗನಿಗೆ ಲಾರಿ ಚಲಾಯಿಸಿ ದೊಡ್ಡ ಉದ್ಯಮಿ ಆಗುವ ಬಯಕೆ. ಅಪ್ಪನ ವಿರೋಧದ ನಡುವೆಯೂ ಮಗ ಸಾಲ ಮಾಡಿ ಲಾರಿಯೊಂದನ್ನು ಖರೀದಿಸಿ ತನ್ನ ಕನಸ ಬೆನ್ನಟ್ಟಿ ಹೊರಡುತ್ತಾರೆ. ಆ ಕನಸಿನ ಹಾದಿಯಲ್ಲಿ ನೂರೆಂಟು ವಿಘ್ನಗಳು. ಈ ವಿಘ್ನಗಳನ್ನ ವಿಜಯ ಸಂಕೇಶ್ವರ್ ಮೆಟ್ಟಿ ನಿಂತು ಹೇಗೆ ಯಶಸ್ವಿಯಾದ್ರು ಅನ್ನೋ ರೋಚಕ ಕಥೆ ಅಚ್ಚುಕಟ್ಟಾಗಿ ತೆರೆ ಮೇಲೆ ಮೂಡಿ ಬಂದಿದೆ.
ಇನ್ನು ವಿಜಯ್ ಸಂಕೇಶ್ವರ್ ಪಾತ್ರದಲ್ಲಿ ನಿಹಾಲ್ ರಜಪೂತ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಾಧಿಸುವ ವ್ಯಕ್ತಿಯಾಗಿ ಇಷ್ಟವಾಗುತ್ತಾರೆ, ಕೋಪ ತಾಪ ತಾಳ್ಮೆಯಲ್ಲೂ ಗಮನ ಸೆಳೆಯುತ್ತಾರೆ. ವಿಜಯ ಸಂಕೇಶ್ವರ್ ತಂದೆ ಪಾತ್ರದಲ್ಲಿ ಅನಂತ್ ನಾಗ್ ಗಂಭೀರ ಅಭಿನಯ, ತಾಯಿ ಪಾತ್ರದಲ್ಲಿ ವಿನಯ್ ಪ್ರಸಾದ್ ಪಾತ್ರ ಅಷ್ಟೇ ಬಹುಮುಖ್ಯವಾಗಿದೆ.
ಈ ಚಿತ್ರದಲ್ಲಿ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ದಾದನಾಗಿ ರವಿಚಂದ್ರನ್ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಪ್ರಕಾಶ್ ಬೆಳವಾಡಿ ಪತ್ರಿಕಾ ಸಂಪಾದಕರಾಗಿ ಗಮನ ಸೆಳೆಯುತ್ತಾರೆ. ಭರತ್ ಭೋಪಣ್ಣ ಸಿಕ್ಕ ಪಾತ್ರದಲ್ಲಿ ಜೀವಿಸಿದ್ದಾರೆ. ಸಿರಿ ಪ್ರಹ್ಲಾದ್ ಕೂಡ ಸಂಕೇಶ್ವರ್ ಪತ್ನಿಯ ಪಾತ್ರದಲ್ಲಿ ಇಷ್ಟ ಆಗುತ್ತಾರೆ. ಉಳಿದಂತೆ ಶೈನ್ ಶೆಟ್ಟಿ, ದಯಾಲ್ ಪದ್ಮನಾಭನ್ ತಮ್ಮ ಪಾತ್ರಗಳಲ್ಲಿ ಮಿಂಚಿದ್ದಾರೆ.
ನಿರ್ದೇಶಕಿ ರಿಷಿಕಾ ಶರ್ಮ, ವಿಜಯ ಸಂಕೇಶ್ವರ ಅವರ ಬದುಕಿನ ಏಳು, ಬೀಳನ್ನು ಕಣ್ಣಿಗೆ ಕಟ್ಟಿಕೊಡುವಲ್ಲಿ ನಿಜಕ್ಕೂ ಯಶಸ್ವಿಯಾಗಿದ್ದಾರೆ. ಆದರೆ ಸಿನಿಮಾ ಆಮೆ ಗತಿಯಲ್ಲಿ ಸಾಗುವುದರ ಜೊತೆಗೆ ಸಿನಿಮಾ ಲೆಂಥ್ ಕೂಡ ಹೆಚ್ಚಾಯ್ತು. ಚಿತ್ರದ ಕೆಲ ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ಸಿನಿಮಾ ವೇಗ ಹೆಚ್ಚಾಗುತ್ತೆ. ಈ ಚಿತ್ರಕ್ಕೆ ಗೋಪಿ ಸುಂದರ್ ಸಂಗೀತ ಹೆಚ್ಚು ಮೈಲೇಜ್ ನೀಡಿದೆ. ಅದಕ್ಕೆ ತಕ್ಕಂತೆ ರಘು ನಿಡುವಳ್ಳಿ ಅವರ ಸಂಭಾಷಣೆ, ಕೀರ್ತನ್ ಪೂಜಾರಿ ಕ್ಯಾಮರಾ ವರ್ಕ್ ವಿಜಯಾನಂದ ಸಿನಿಮಾದ ಅಂದವನ್ನ ಹೆಚ್ಚಿಸುತ್ತೆ.
ಒಟ್ಟಾರೆ ವಿಜಯ್ ಸಂಕೇಶ್ವರ ಅವರ ಬದುಕು ಈಗ ಸುಂದರ, ಆದರೆ ಸಂಕೇಶ್ವರ್ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಬೆಳೆಯುವುದರ ಹಿಂದೆ ಏನೆಲ್ಲಾ ಸಮಸ್ಯೆ ಇತ್ತು, ಹೇಗೆಲ್ಲಾ ಎದುರಿಸಿದರು. ಯಾರೆಲ್ಲಾ ಜೊತೆಗಿದ್ದರು, ಹೇಗೆಲ್ಲ ಸಹಾಯ ಮಾಡಿದರು ಎಂದು ತಿಳಿಯುವ ಕುತೂಹಲವಿದ್ದರೆ, ಒಮ್ಮೆ ಈ ಬಯೋಪಿಕ್ ಸಿನಿಮಾ ನೋಡಿ. ಅದರಲ್ಲಿ ಯುವ ಪೀಳಿಗೆಗೆ ವಿಜಯಾನಂದ ಸಿನಿಮಾ ಸ್ಫೂರ್ತಿಯಾಗಲಿದೆ.
(ಓದಿ: ನಾಳೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಕನ್ನಡದ ಮೊದಲ ಬಯೋಪಿಕ್ 'ವಿಜಯಾನಂದ' )