ಪುಣೆ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮರಾಠಿ ಹಾಗೂ ಬಾಲಿವುಡ್ ಲೋಕದ ಹಿರಿಯ ನಟ ವಿಕ್ರಮ್ ಗೋಖಲೆ ಇಂದು ಮಧ್ಯಾಹ್ನ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಹದಿನೈದು ದಿನಗಳಿಂದ ನಟ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ದಾಖಲಾಗಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ವಿಕ್ರಮ್ ಗೋಖಲೆ ನಿಧನ ಸುದ್ದಿಯಿಂದ ನಟನಾ ಕ್ರೇತ್ರ ಶೋಕ ಸಾಗರದಲ್ಲಿ ಮುಳುಗಿದೆ.
ತಮ್ಮ 77ನೇ ವಯಸ್ಸಿಗೆ ಇಹಲೋಕ ತ್ಯಜಿಸಿರುವ ವಿಕ್ರಮ್ ಗೋಖಲೆ ಹೆಸರಾಂತ ಮರಾಠಿ ರಂಗಭೂಮಿ ಹಾಗೂ ಸಿನಿಮಾ ನಟ ಚಂದ್ರಕಾಂತ್ ಗೋಖಲೆ ಅವರ ಪುತ್ರ. ವಿಕ್ರಮ್ ಗೋಖಲೆ ಅವರು ಹಿರಿತೆರೆ ಮಾತ್ರವಲ್ಲದೇ ಕಿರುತೆರೆ ಹಾಗೂ ರಂಗ ಕಲಾವಿದರಾಗಿಯೂ ಹೆಸರು ಪಡೆದಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ಅವರ 'ಹಮ್ ದಿಲ್ ದೇ ಚುಕೆ ಸನಮ್' ಚಿತ್ರದಲ್ಲಿ ಐಶ್ವರ್ಯಾ ರೈ ಅವರ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದರು. ಕಮಲ ಹಾಸನ್ ಅಭಿನಯದ 'ಹೇ ರಾಮ್', 'ಭೂಲ್ ಭುಲಯ್ಯ' ಸಿನಿಮಾದಲ್ಲಿ ಆಚಾರ್ಯ ಯಾಗ್ಯಪ್ರಕಾಶ್ ಭರ್ತಿ ಪಾತ್ರ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಅಪಾರ ಮೆಚ್ಚುಗೆ ಗಳಿಸಿದ್ದರು.
ಅಭಿನಯ ಮಾತ್ರವಲ್ಲದೆ, 2010ರಲ್ಲಿ ಮರಾಠಿ ಸಿನಿಮಾ 'ಆಘಾತ್' ಮೂಲಕ ನಿರ್ದೇಶಕನ ಟೋಪಿಯನ್ನೂ ಧರಿಸಿದ್ದರು. ಮರಾಠಿ ಚಲನಚಿತ್ರ 'ಅನುಮತಿ' ಯಲ್ಲಿ ತಮ್ಮ ವಿಶಿಷ್ಠ ಅಭಿನಯಕ್ಕಾಗಿ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರದ್ದು. ರಂಗಭೂಮಿಯ ಸಾಧನೆಗಾಗಿ 2011 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದರು.
ಸಾವಿನ ವದಂತಿ: ಕೆಲ ದಿನಗಳ ಹಿಂದೆ ವಿಕ್ರಮ್ ಗೋಖಲೆ ಅವರ ಸಾವಿನ ಬಗ್ಗೆ ವದಂತಿ ಹರಡಿತ್ತು. ನಂತರ ಅವರ ಮಗಳು ತಂದೆ ಜೀವಂತವಾಗಿದ್ದು, ಲೈಫ್ ಸಫರ್ಟ್ನಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ನಟ ವಿಕ್ರಮ್ ಗೋಖಲೆ ನಿಧನದ ವದಂತಿ ತಳ್ಳಿಹಾಕಿದ ಕುಟುಂಬ: ತಂದೆ ಜೀವಂತವಾಗಿದ್ದಾರೆ ಎಂದ ಮಗಳು