ಕಾಂತಾರ ಸಿನಿಮಾದ ಜನಪ್ರಿಯ ವರಾಹ ರೂಪಂ ಹಾಡಿನ ವಿಚಾರವಾಗಿ ತಗಾದೆ ತೆಗೆದು ಕೋಝಿಕೋಡ್ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದ ತೈಕ್ಕುಡಂ ಬ್ರಿಡ್ಜ್ ಆಲ್ಬಂ ತಂಡಕ್ಕೆ ಹಿನ್ನಡೆಯಾಗಿದೆ. ಈ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ಅಮೆಜಾನ್ ಪ್ರೈಮ್ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಕಾಂತಾರ ಸಿನಿಮಾ ಸ್ಟ್ರೀಮ್ ಆಗುತ್ತಿದ್ದು ಈಗಾಗಲೇ ಸಾಕಷ್ಟು ಮಂದಿ ನೋಡಿದ್ದಾರೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅಮೆಜಾನ್ ಮೂಲ ವಿಡಿಯೋ ಹಾಡನ್ನು ತಮಿಳು ಮತ್ತು ಮಲಯಾಳಂ ಆವೃತ್ತಿಯಲ್ಲಿ ಸೇರಿಸಿದೆ. ಇದನ್ನು ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಇನ್ನಷ್ಟೇ ಸೇರಿಸಬೇಕಾಗಿದೆ. ಮತ್ತೊಂದೆಡೆ, ಕೇರಳ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯದಲ್ಲೂ ಅರ್ಜಿ ಸಲ್ಲಿಸಲಾಗಿದೆ. ಈ ಪ್ರಕರಣ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಈ ಮಧ್ಯೆ, ಮಲಯಾಳಂ ಮತ್ತು ತಮಿಳು ಆವೃತ್ತಿಗಳಲ್ಲಿ ಮೂಲ ಹಾಡನ್ನು ಸೇರಿಸಿರುವುದು ಗಮನಾರ್ಹವಾಗಿದೆ.
ಪ್ರಕರಣವೇನು?: ತಮ್ಮ ಬ್ಯಾಂಡ್ನ ಒರಿಜಿನಲ್ ಮ್ಯೂಸಿಕ್ ಅನ್ನು ಚಲನಚಿತ್ರ ತಯಾರಕರು ನಕಲು ಮಾಡಿದ್ದಾರೆ ಎಂದು ಆರೋಪಿಸಿ, ಹಾಡಿಗೆ ತಡೆ ಕೋರಿ ತೈಕುಡಮ್ ಬ್ರಿಡ್ಜ್ ಆಲ್ಬಂ ಬ್ಯಾಂಡ್ನವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 'ವರಾಹರೂಪಂ' ಹಾಡು 2015 ರಲ್ಲಿ ಬಿಡುಗಡೆ ಮಾಡಿದ ತಮ್ಮ ಮೂಲ ಸಂಯೋಜನೆ 'ನವರಸ'ದ ನಕಲು ಎಂದು ಬ್ಯಾಂಡ್ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಹಾಡನ್ನು ಪ್ರಸಾರ ಮಾಡದಂತೆ ಅಮೆಜಾನ್ ಪ್ರೈಮ್, ಯೂಟ್ಯೂಬ್ ಮತ್ತು ಲಿಂಕ್ ಮ್ಯೂಸಿಕ್ ಕಂಪನಿಗಳಿಗೆ ಕೇರಳ ನ್ಯಾಯಾಲಯ ನಿರ್ದೇಶಿಸಿತ್ತು.
ಇದನ್ನೂ ಓದಿ: ಗಡಿ ದಾಟಿ ಪ್ರಶಂಸೆ ಗಿಟ್ಟಿಸಿಕೊಂಡ ಕಾಂತಾರ.. ರಿಷಬ್ ಬೆನ್ನು ತಟ್ಟಿದ ಗೋವಾ ಸಿಎಂ
ರಿಷಬ್ ಶೆಟ್ಟಿ ನಿರ್ದೇಶನದ ಬ್ಲಾಕ್‌ಬಸ್ಟರ್ ಚಿತ್ರ ಈಗಾಗಲೇ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಚಿತ್ರ ಬಿಡುಗಡೆ ಕಂಡು 60 ದಿನಗಳಾದರೂ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗಿಲ್ಲ.