ನವರಸನಾಯಕ ಜಗ್ಗೇಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ತೋತಾಪುರಿ. ಶೀರ್ಷಿಕೆ ಹಾಗೂ ಟ್ರೈಲರ್ನಿಂದಲೇ ದಕ್ಷಿಣ ಭಾರತದಲ್ಲಿ ಟಾಕ್ ಆಗುತ್ತಿರುವ ತೋತಾಪುರಿ ಸಿನಿಮಾ ಬಿಡುಗಡೆಗೆ ಇನ್ನೆರಡು ದಿನಗಳು ಬಾಕಿ ಇವೆ. ಈ ಹಿನ್ನೆಲೆ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ, ಟ್ರೈನ್ನಲ್ಲಿ ತಮ್ಮ ಸಿನಿಮಾ ಪೋಸ್ಟರ್ ಅಳವಡಿಸುವ ಮೂಲಕ ವಿನೂತನವಾಗಿ ಸಿನಿಮಾ ಪ್ರಚಾರಕ್ಕೆ ಮುಂದಾಗಿದ್ದಾರೆ. ಬೆಂಗಳೂರು ಟು ಮೈಸೂರು ರೈಲಿನಲ್ಲಿ ತೋತಾಪುರಿ ಪೋಸ್ಟರ್ ರಾರಾಜಿಸುತ್ತಿದೆ.
ಬೆಂಗಳೂರು ಟು ಮೈಸೂರುಗೆ ಹೋದ ರೈಲಿನಲ್ಲಿ ತೋತಾಪುರಿ ಪೋಸ್ಟರ್ ಹಾಕಲಾಗಿತ್ತು. ಯಶವಂತಪುರದಿಂದ ಹೊರಟ ರೈಲಿನ ಮೂಲಕ ನಟ ಜಗ್ಗೇಶ್, ನಟಿ ಅದಿತಿ ಪ್ರಭುದೇವ, ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ನಿರ್ಮಾಪಕ ಕೆ. ಸುರೇಶ್ ವಿಭಿನ್ನ ಪ್ರಚಾರಕ್ಕೆ ನಾಂದಿ ಹಾಡಿದರು.
ಇನ್ನೂ ತೋತಾಪುರಿ ಟ್ರೈಲರ್ ಅನ್ನು ಬರೋಬ್ಬರಿ ಒಂದು ಮಿಲಿಯನ್ ಜನ ನೋಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನವರಸ ನಾಯಕ ಜಗ್ಗೇಶ್ ಮದುವೆ ಆಗದ ಟೈಲರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಡಬಲ್ ಮಿನಿಂಗ್ ಡೈಲಾಗ್ಗಳನ್ನು ಕೇಳಬಹುದಾಗಿದೆ. ಜಗ್ಗೇಶ್ ಜೋಡಿಯಾಗಿ ನಟಿ ಅದಿತಿ ಪ್ರಭುದೇವ ಮುಸ್ಲಿಂ ಹುಡುಗಿ ಪಾತ್ರ ಮಾಡಿದ್ದಾರೆ.
ಇನ್ನು ಧನಂಜಯ್, ಸುಮನ್ ರಂಗನಾಥ್, ನಟಿ ವೀಣಾ ಸುಂದರ್, ಹಿರಿಯ ನಟ ದತ್ತಣ್ಣ, ಹೇಮದತ್ ಹೀಗೆ ದೊಡ್ಡ ತಾರ ಬಳಗ ಈ ಚಿತ್ರ ದಲ್ಲಿದೆ. ಗಲಭೆ ಇಲ್ಲದ ಒಂದು ಪ್ರೇಮ ಕಥೆಯನ್ನು ತೆರೆ ಮೇಲೆ ತರುವ ಪ್ರಯತ್ನವನ್ನ ನಿರ್ದೇಶಕ ವಿಜಯ್ ಪ್ರಸಾದ್ ಮಾಡಿದ್ದಾರೆ.
ದಸರಾ ನಂಟು, ತೋತಾಪುರಿ ಅಂಟು ಅಂತಾ ಹೇಳುವ ಮೂಲಕ ಸೆಪ್ಟೆಂಬರ್ 30ಕ್ಕೆ, ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ ಭಾಷೆಯಲ್ಲಿ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ ಅಂತಾ ಚಿತ್ರತಂಡ ಹೇಳಿದೆ. ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದು, ಬಿಡುಗಡೆ ಆಗಿರುವ ಹಾಡುಗಳು ಕೇಳುಗರ ಮೆಚ್ಚುಗೆ ಗಳಿಸಿವೆ.
ಇದನ್ನೂ ಓದಿ: ಸೆನ್ಸಾರ್ನಿಂದ ಯುಎ ಸರ್ಟಿಫಿಕೇಟ್ ಪಡೆದ ತೋತಾಪುರಿ ಸಿನಿಮಾ.. ನಕ್ಕು ನಗಿಸಲಿದ್ದಾರೆ ನವರಸನಾಯಕ ಜಗ್ಗೇಶ್
ಗೋವಿಂದಾಯ ನಮಃ ಹಾಗೂ ಶಿವಲಿಂಗ ಅಂತಾ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಕೆ.ಎ ಸುರೇಶ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸದ್ಯ ತೋತಾಪುರಿ ಪಾರ್ಟ್ ಒನ್ ಪ್ರಚಾರಕ್ಕೆ ಜಗ್ಗೇಶ್ ಕೈ ಜೋಡಿಸಿದ್ದಾರೆ. ಈ ವಿನೂತನ ಸಿನಿಮಾ ಪ್ರಮೋಷನ್ಗೆ ತೋತಾಪುರಿ ಚಿತ್ರತಂಡ ಸಾಕ್ಷಿಯಾಗಿದೆ.