ಸ್ಯಾಂಡಲ್ವುಡ್ ಉತ್ತಮ ಕಥಾಹಂದರವುಳ್ಳ ಸಿನಿಮಾಗಳನ್ನು ಪ್ರೇಕ್ಷಕರಿಗೆ ತಲುಪಿಸುತ್ತಿದೆ. ಸಾಲು ಸಾಲಾಗಿ ಉತ್ತಮ ಸಿನಿಮಾಗಳು ರಿಲೀಸ್ ಆಗಿ ಹಿಟ್ ಆಗುತ್ತಿವೆ. ಇದೀಗ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಸಿನಿಮಾ ಸುದ್ದಿಯಲ್ಲಿದೆ. ತಾತ ಮೊಮ್ಮಗನ ಪಾತ್ರದಲ್ಲಿ ಅನಂತ್ ನಾಗ್ ಮತ್ತು ದಿಗಂತ್ ನಟಿಸಿರುವ ಈ ಸಿನಿಮಾ ಇಂದು ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ಗಳಿಸುತ್ತಿದೆ.
ತಾತ ಮೊಮ್ಮಗನ ಗಲಾಟೆ, ತರ್ಲೆ, ತಮಾಷೆ ಇದರ ನಡುವೆ ಒಂದು ಭಾವನಾತ್ಮಕ ಸಂಬಂಧದ ಕಥೆಯನ್ನು ನಿರ್ದೇಶಕ ಸಂಜಯ್ ಶರ್ಮಾ ಬಿಗ್ ಸ್ಕ್ರೀನ್ ಮೇಲೆ ಬಹಳ ಅಚ್ಚು ಕಟ್ಟಾಗಿ ಹೇಳುವ ಮೂಲಕ ನೋಡುಗರನ್ನು ಭಾವುಕರನ್ನಾಗಿಸಿದ್ದಾರೆ. ತಾತ ಮೊಮ್ಮಗನ ಪಾತ್ರಕ್ಕೆ ಅನಂತ್ ನಾಗ್ ಮತ್ತು ದಿಗಂತ್ ಜೀವ ತುಂಬಿದ್ದಾರೆ. ದಿಗಂತ್ ಜೋಡಿಯಾಗಿ ಇಬ್ಬರು ನಟಿಯರಾದ ಶುಭ್ರಾ ಅಯ್ಯಪ್ಪ ಹಾಗೂ ದಿಗಂತ್ ಪತ್ನಿ ಐಂದ್ರಿತಾ ರೇ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಜ್ರಕಾಯ ಸಿನಿಮಾ ಬಳಿಕ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಚಿತ್ರದಲ್ಲಿ ನಟಿಸಿರುವ ಶುಭ್ರಾ ಅಯ್ಯಪ್ಪ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಈ ಕಥೆ ಕೇಳಿದಾಕ್ಷಣ ಈ ಸಿನಿಮಾದಲ್ಲಿ ನಟಿಸುತ್ತೇನೆಂದು ಒಪ್ಪಿಕೊಂಡೆ. ಸಂಜಯ್ ಸರ್ ಜೊತೆ ಮತ್ತೆ ಸಿನಿಮಾ ಮಾಡುವ ಆಸೆ ಇದೆ. ಈ ಸಿನಿಮಾ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ ಕಥೆ ಹೊಂದಿದೆ. ನಾನು ಈ ಸಿನಿಮಾದ ಭಾಗವಾಗಿರೋದಕ್ಕೆ ಖುಷಿ ಇದೆ ಎಂದು ತಿಳಿಸಿದರು.
ಐಂದ್ರಿತಾ ರೇ ಕೂಡ ಈ ಚಿತ್ರದಲ್ಲಿ ಒಂದು ವಿಭಿನ್ನ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಕಥೆ ಕೇಳಿದ್ದು, ಜಿಮ್ನಲ್ಲಿ. ನಾನು, ದಿಗಂತ್ ಸಾಕಷ್ಟು ಬಾರಿ ಚರ್ಚೆ ಮಾಡಿ ಸ್ಕ್ರಿಪ್ಟ್ನಲ್ಲಿ ತೂಕ ಇದ್ರೆ ಮಾತ್ರ ಸಿನಿಮಾ ಮಾಡೋಣ ಅಂತಾ ಮಾತನಾಡಿದ್ವಿ. ಅದೇ ರೀತಿಯ ಕಥೆ ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರ ಹೊಂದಿತ್ತು. ನನಗೆ ಅನಂತ್ ನಾಗ್ ಅವರ ಜೊತೆ ಕೆಲಸ ಮಾಡುವ ಆಸೆ ಇತ್ತು. ಅದು ಈ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ವರ್ಕ್ ಔಟ್ ಆಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ತಂದೆಯಂತೆ ಧೈರ್ಯವಂತೆ ಬಾಲಯ್ಯರ ಹಿರಿಮಗಳು: ಡೇರಿಂಗ್ ರಾಣಿಯ ಲಡಾಖ್ ಪ್ರವಾಸ
ಮೂವತ್ತು ವರ್ಷಗಳ ನಂತರ ತಾತ ಹಾಗೂ ಮೊಮ್ಮಗ ಭೇಟಿಯಾದಾಗ ಆಗುವ ಸಂತೋಷ, ಪ್ರೀತಿ, ಎಮೋಷನ್, ಕೊಂಚ ಕಿರಿಕಿರಿ ಸೇರಿದಂತೆ ಸಂಬಂಧಗಳನ್ನು ಗಟ್ಟಿಗೊಳಿಸುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.