ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ ನೂರಾರು ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಈ ವರ್ಷ ಕೂಡ ಇದಕ್ಕೆ ಹೊರತಾಗಿಲ್ಲ. 2023 ಕೊನೆಗೊಳ್ಳುವುದಕ್ಕೆ ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಚಂದನವನದಲ್ಲಿ 200ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆ ಆಗಿವೆ. ಆದರೆ ಸಕ್ಸಸ್ ರೇಟ್ ಮಾತ್ರ ಕಡಿಮೆ. ಈ ವರ್ಷ ತೆರೆ ಕಂಡ ಚಿತ್ರಗಳ ಪೈಕಿ ಹೊಸಬರ ಪಾಲು ಹೆಚ್ಚು. ವರ್ಷಕ್ಕೆ ಮೂರು ಸಿನಿಮಾಗಳನ್ನು ಮಾಡುತ್ತಿದ್ದ ಸ್ಟಾರ್ ನಟರು ಈ ವರ್ಷ ಒಂದು ಸಿನಿಮಾನೂ ಮಾಡಿಲ್ಲ.
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಈ ವರ್ಷ ಕಾಲಿವುಡ್ ನಟ ರಜನಿಕಾಂತ್ ಮುಖ್ಯಭೂಮಿಕೆಯ 'ಜೈಲರ್' ಸಿನಿಮಾದಲ್ಲಿ ನಟಿಸಿ ಅದ್ಭುತ ಯಶಸ್ಸು ಕಂಡಿದ್ದಾರೆ. 'ಘೋಸ್ಟ್' ಚಿತ್ರಕ್ಕೂ ನಿರೀಕ್ಷೆಗೂ ಮೀರಿದ ಸಕ್ಸಸ್ ಸಿಕ್ಕಿದೆ. ಏಕಕಾಲಕ್ಕೆ ಎರಡ್ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮತ್ತೊಂದೆಡೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಇದೇ ತಿಂಗಳ ಕೊನೆಯಲ್ಲಿ ತೆರೆ ಕಾಣಲಿದೆ. ಇನ್ನೂ ರಿಯಲ್ ಸ್ಟಾರ್ ಉಪೇಂದ್ರ ಅವರ 'ಕಬ್ಜ' ಪ್ರೇಕ್ಷಕರಿಗೆ ಅಷ್ಟೊಂದು ಇಷ್ಟವಾಗದೇ ಇದ್ರು, ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಮಾಡಿದೆ.
ಉಳಿದಂತೆ, ನಟರಾಕ್ಷಸ ಡಾಲಿ ಧನಂಜಯ್ ಅವರಿಗೆ ಈ ವರ್ಷ ಲಕ್ಕಿ ಅಂತಲೇ ಹೇಳಬಹುದು. ಅವರ ನಟನೆಯ 'ಗುರುದೇವ ಹೊಯ್ಸಳ' ನಿರೀಕ್ಷೆಗೂ ಮೀರಿದ ಯಶಸ್ಸನ್ನು ಪಡೆದುಕೊಂಡಿದೆ. ಜಗ್ಗೇಶ್ ಜೊತೆಗಿನ 'ತೋತಾಪುರಿ 2' ಚಿತ್ರ ಕೂಡ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಡಾಲಿ ನಿರ್ಮಾಣದ 'ಟಗರು ಪಲ್ಯ' ಸಿನಿಮಾದಲ್ಲಿ ಹೊಸಬರೇ ಹೆಚ್ಚಿದ್ದರೂ ಕೂಡ ಅದ್ಭುತ ಯಶಸ್ಸನ್ನು ಕಂಡಿದೆ.
ಮತ್ತೊಂದೆಡೆ, ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಎರಡು ಭಾಗಗಳಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಯಿತು. ರಾಜ್ ಬಿ ಶೆಟ್ಟಿ ಟೋಬಿ ಮತ್ತು ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬ ಎರಡು ವಿಭಿನ್ನ ಚಿತ್ರಗಳಲ್ಲಿ ನಟಿಸಿದರು. ನಂತರ ಗಣೇಶ್ ಅಭಿನಯದ ಬಾನ ದಾರಿಯಲಿ, ಪ್ರಜ್ವಲ್ ಅಭಿನಯದ ತತ್ಸಮ ತದ್ಭವ ಮತ್ತು ವೀರಂ, ವಿಜಯ್ ರಾಘವೇಂದ್ರ ಅಭಿನಯದ ಕದ್ದಚಿತ್ರ, ಮರೀಚಿ ಮತ್ತು ಕಾಸಿನ ಸರ ಚಿತ್ರಗಳು ಬಿಡುಗಡೆ ಆಗಿವೆ.
ಇನ್ನೂ ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಬರ್ಡ್ಸ್, ಕೌಸಲ್ಯ ಸುಪ್ರಜಾ ರಾಮ ಮತ್ತು ಶುಗರ್ ಫ್ಯಾಕ್ಟರಿ ಚಿತ್ರಗಳಲ್ಲಿ ಕೌಸಲ್ಯ ಸುಪ್ರಜಾ ರಾಮ ಸಿನಿಮಾ ಪ್ರೇಕ್ಷಕರ ಮನೆ ಗೆದ್ದಿತ್ತು. ಕೋಮಲ್ ಅಭಿನಯದ ಉಂಡೆ ನಾಮ, ನಮೋ ಭೂತಾತ್ಮ 2 ಚಿತ್ರಗಳು ಬಿಡುಗಡೆಯಾಗಿವೆ. ಅಭಿಷೇಕ್ ಅಂಬರೀಷ್, ವಸಿಷ್ಠ ಸಿಂಹ, ವಿನೋದ್ ಪ್ರಭಾಕರ್, ಪ್ರಮೋದ್, ಧನ್ವೀರ್, ಪೃಥ್ವಿ ಅಂಬರ್ ಮುಂತಾದವರು ತಲಾ ಒಂದೊಂದು ಸಿನಿಮಾಗಳಲ್ಲಿ ಕಾಣಿಸಿಕೊಂಡರು.
ಉಳಿದಂತೆ ಈ ವರ್ಷ ಅಭಿಮಾನಿಗಳಿಗೆ ದರ್ಶನ ಕೊಡದ ನಟರ ದೊಡ್ಡ ಪಟ್ಟಿಯೇ ಇದೆ. ಯಶ್, ಧ್ರುವ ಸರ್ಜಾ, ಶ್ರೀಮುರಳಿ, ಶರಣ್, ದುನಿಯಾ ವಿಜಯ್, ನೆನಪಿರಲಿ ಪ್ರೇಮ್, ಲೂಸ್ ಮಾದ ಯೋಗಿ, ರಿಷಬ್ ಶೆಟ್ಟಿ, ಸತೀಶ್ ನೀನಾಸಂ, ಅಜೇಯ್ ರಾವ್, ರಿಷಿ ಮುಂತಾದವರ ಚಿತ್ರಗಳು ಬಿಡುಗಡೆಯಾಗಿಲ್ಲ. 'ಕಬ್ಜ' ಸಿನಿಮಾದಲ್ಲಿ ಸುದೀಪ್ ಎರಡು ದಿನಗಳ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ಮಿಕ್ಕಂತೆ ಅವರು ಪೂರ್ಣಪ್ರಮಾಣ ನಾಯಕನಾಗಿ ಅಭಿನಯಿಸಿದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ.
ಈ ಪೈಕಿ ಧ್ರುವ ಸರ್ಜಾ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದು, ಮಾರ್ಟಿನ್ ಮತ್ತು ಕೆಡಿ ಎರಡೂ ಪೂರ್ತಿಯಾಗಿಲ್ಲ. ಶ್ರೀಮುರಳಿಗೆ ಕಾಲಿಗೆ ಪೆಟ್ಟಾಗಿದ್ದರಿಂದ ಅವರ ಅಭಿನಯದ 'ಬಘೀರ' ಈ ವರ್ಷ ಬಿಡುಗಡೆಯಾಗಿಲ್ಲ. 'ಸಲಗ' ಬಳಿಕ ದುನಿಯಾ ವಿಜಯ್ ಅಭಿನಯದ ಭೀಮ, ಶರಣ್ ನಟನೆಯ ಛೂ ಮಂತರ್, ಸತೀಶ್ ನೀನಾಸಂ ಅಭಿನಯದ ಮ್ಯಾಟ್ನಿ, ಅಜೇಯ್ ರಾವ್ ನಟಿಸುತ್ತಿರುವ ಯುದ್ಧಕಾಂಡ ಚಿತ್ರಗಳ ಶೂಟಿಂಗ್ ಮುಗಿದರೂ ಬಿಡುಗಡೆಯಾಗಲಿಲ್ಲ. ಎಲ್ಲ ಚಿತ್ರಗಳೂ 2024ರಲ್ಲಿ ಬಿಡುಗಡೆಯಾಗಲಿವೆ.
ಯಶ್ ಅಭಿನಯದ ಚಿತ್ರ ಮುಂದಿನ ವರ್ಷವೂ ಬಿಡುಗಡೆಯಾಗುವುದಿಲ್ಲ. 2025ಕ್ಕೆ ಟಾಕ್ಸಿಕ್ ತೆರೆ ಕಾಣಲಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ ಅಧ್ಯಾಯ 1 ಚಿತ್ರದ ಚಿತ್ರೀಕರಣ ಮುಂದಿನ ಜನವರಿಯಲ್ಲಿ ಪ್ರಾರಂಭವಾಗಲಿದ್ದು, ಡಿಸೆಂಬರ್ ಹೊತ್ತಿಗೆ ಬಿಡುಗಡೆಯಾಗುವುದು ಕೂಡ ಸಂಶಯ. ಹಾಗಾಗಿ ಅವರ ಚಿತ್ರವೂ 2025ರಲ್ಲೇ ಎನ್ನಬಹುದು. ಒಟ್ಟಾರೆ 2023ನೇ ವರ್ಷದಲ್ಲಿ ಈ ನಟರ ಯಾವ ಸಿನಿಮಾಗಳು ಬಿಡುಗಡೆ ಆಗಿಲ್ಲ.
ಇದನ್ನೂ ಓದಿ: 2024ಕ್ಕೆ ಬೆಳ್ಳಿ ಪರದೆಗೆ ಅಪ್ಪಳಿಸಲಿರುವ ಕನ್ನಡದ ಸ್ಟಾರ್ ನಟರ ಸಿನಿಮಾಗಳು