ಸ್ಯಾಂಡಲ್ವುಡ್ ಅಂಗಳದಲ್ಲಿ ಸದ್ದಿಲ್ಲದೇ ಸಿದ್ಧವಾಗಿರುವ ಹೊಸ ಸಿನಿಮಾ 'ದ ರೂಲರ್ಸ್'. ಟೈಟಲ್‌ನಡಿ 'Power of Constitution' ಎಂಬ ಅಡಿಬರಹವಿದೆ. ಟೀಸರ್ ಹೊಸ ವರ್ಷದ ಮೊದಲ ದಿನ ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ರಿಲೀಸ್ ಆಗಿತ್ತು.
- " class="align-text-top noRightClick twitterSection" data="">
'ದ ರೂಲರ್ಸ್' ನೈಜ ಘಟನೆಗಳನ್ನಾಧರಿಸಿ ಮಾಡಿರುವ ಚಿತ್ರವಂತೆ. ಕೋಲಾರ ಜಿಲ್ಲೆಯಲ್ಲಿ ನಡೆದಿರುವ, ನಡೆಯುತ್ತಿರುವ ಘಟನಾವಳಿಗಳೇ ಇದರ ಕಥೆ. ಸಂವಿಧಾನದ ಆಸರೆ, ಭಾರತೀಯ ಪ್ರಜ್ಞೆಗೆ ಕೊಟ್ಟಿರುವ ಶಕ್ತಿಯನ್ನು ಮೂಲವಾಗಿರಿಸಿಕೊಳ್ಳಲಾಗಿದೆ ಎಂದು ಚಿತ್ರತಂಡ ಹೇಳಿದೆ.
ಮೇಲು-ಕೀಳೆಂಬ ಸಮುದಾಯಗಳ ಸಂಘರ್ಷದಿಂದ ಮರೆಯಾದ ಮಾನವೀಯತೆಯನ್ನು ಒಂದೆಡೆ ಬಿಂಬಿಸಿದರೆ, ಮತ್ತೊಂದೆಡೆ ಸಂವಿಧಾನ ಕೊಟ್ಟಿರುವ ಸಮಾನತೆಯ ಹಕ್ಕನ್ನು ಪ್ರತಿಪಾದಿಸುವುದು, ಅದರ ಶಕ್ತಿಯನ್ನು ಪ್ರದರ್ಶಿಸುವ ಮತ್ತೊಂದು ಮಜಲನ್ನು ಚಿತ್ರದಲ್ಲಿ ಅನಾವರಣಗೊಳಿಸಿದ್ದಾರಂತೆ.
ಹೊಸ ಪ್ರತಿಭೆ ವಿಶಾಲ್, ರಿತಿಕಾ ಗೌಡ, ಕೆ.ಜಿ.ಎಫ್ನ ಪಠಾಣ್ ಖ್ಯಾತಿಯ ಪುನೀತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದ ರೂಲರ್ಸ್‌ನಲ್ಲಿ ದ ಅಂದರೆ ದಲಿತ. ಇದಕ್ಕೆ ರೂಲರ್ಸ್ಸ್ ಅಂತ ಹೆಸರಿಟ್ಟಿರುವುದರ ಹಿಂದೆ ವಿಚಾರ ಇದೆಯಂತೆ. 5ಜಿ ಜಮಾನದಲ್ಲೂ ಇನ್ನೂ ಜಾತಿ ಎಂಬ ಪಿಡುಗು ಎಷ್ಟರ ಮಟ್ಟಿಗೆ ಶೀತಲವಾಗಿ ಸಮಾಜದೊಳಗಿದೆ. ಮತ್ತು ಅದರ ಪರಿಣಾಮವೇನು ಎನ್ನುವುದನ್ನು ಈ ಚಿತ್ರದಲ್ಲಿ ಹೇಳಿದ್ದಾರಂತೆ.
ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವುದು ಕೋಲಾರದ ಡಾ.ಕೆ.ಎಂ.ಸಂದೇಶ್. ಡಾ.ಬಿ.ಆರ್.ಅಂಬೇಡ್ಕರ್ ತತ್ವ ಸಿದ್ಧಾಂತವನ್ನು ಮೈಗೂಡಿಸಿಕೊಂಡು, ವರ್ಷಗಳಿಂದ ಸಾಮಾಜಿಕ ಸಮಾನತೆಗಾಗಿ 300ಕ್ಕೂ ಹೆಚ್ಚು ಹೋರಾಟ ಹಾಗೂ 150ಕ್ಕೂ ಹೆಚ್ಚು ಅಂತರ್ಜಾತಿ ವಿವಾಹಗಳನ್ನು ಮಾಡಿರುವ ಇವರು, ತಮ್ಮ ಬದುಕಿನಲ್ಲೇ ನಡೆದ ಘಟನೆಗಳನ್ನು ಇಟ್ಟುಕೊಂಡು ಕಮರ್ಷಿಯಲ್ಲಾಗಿ ಸಿನಿಮಾ ಮಾಡಿದ್ದಾರೆ.
ಎಂ.ಎನ್.ಎಂ ಮೂವೀಸ್ ಬ್ಯಾನರ್‌ನಡಿಯಲ್ಲಿ ಅಶ್ವಥ್ ಬಳಗೆರೆ ನಿರ್ಮಾಣದಲ್ಲಿ, ಉದಯ್ ಭಾಸ್ಕರ್ ನಿರ್ದೇಶನ ಮಾಡಿದ್ದಾರೆ. ಕರುಣ್ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾವನ್ನು ಸದ್ಯದಲ್ಲೇ ಪ್ರೇಕ್ಷಕರೆದುರು ತರುವ ಕೆಲಸದಲ್ಲಿ ಚಿತ್ರತಂಡ ತೊಡಗಿದೆ.
ಇದನ್ನೂ ಓದಿ: ಅಂತಿಮ ಹಂತದಲ್ಲಿ 'ದೇಸಾಯಿ' ಶೂಟಿಂಗ್: ಪ್ರವೀಣ್ ಕುಮಾರ್, ರಾಧ್ಯ ಸಿನಿಮಾದ ಮಾಹಿತಿ