ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ನೋಡಿದವರು, ಈ ಚಿತ್ರದಲ್ಲಿ ಕಿಚ್ಚ ಸುದೀಪ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಾ ಎಂಬ ಪ್ರಶ್ನೆ ಹುಟ್ಟಿಸುತ್ತೆ. ಆದರೆ, ನಿಮ್ಮ ಊಹೆ ತಪ್ಪು. ಥ್ರಿಲ್ಲಿಂಗ್ ಆ್ಯಕ್ಷನ್ ಜೊತೆಗೆ ಅಡ್ವೆಂಚರ್ ಕಥೆ ಆಧರಿಸಿರೋ ಫ್ಯಾಂಟಸಿ ಸಿನಿಮಾ ವಿಕ್ರಾಂತ್ ರೋಣ ಆಗಿದೆ. ಕಮರೊಟ್ಟು ಎಂಬ ಊರಿನ ದಟ್ಟ ಕಾಡಿನಲ್ಲಿ ಹೋಗಬೇಕಾದರೆ ಮುಖ್ಯವಾಗಿ ಮಕ್ಕಳನ್ನ ಅಪಹರಿಸಿ, ಯಾಕೆ ಸಾಯಿಸಲಾಗುತ್ತಿದೆ ಅನ್ನೋದು ವಿಕ್ರಾಂತ್ ರೋಣ ಸಿನಿಮಾದ ಕಥೆ.
ಈ ಮಕ್ಕಳ ಸಾವಿನ ರಹಸ್ಯ ಕಂಡು ಹಿಡಿಯಲು ಬರುವವರೇ, ಬಹಳ ಧೈರ್ಯವಂತ ಹಾಗೂ ಬುದ್ಧಿವಂತ ಪೊಲೀಸ್ ಆಫೀಸರ್ ವಿಕ್ರಾಂತ್ ರೋಣ ಅಂದ್ರೆ ಕಿಚ್ಚ ಸುದೀಪ್. ಈ ಚಿತ್ರದಲ್ಲಿ ಕಿಚ್ಚನ ಎಂಟ್ರಿ ನಿಜಕ್ಕೂ, ಸುದೀಪ್ ಅಭಿಮಾನಿಗಳನ್ನ ಹುಚ್ಚು ಎದ್ದು ಕುಣಿಯುವಂತೆ ಮಾಡುತ್ತದೆ. ಯಾಕಂದ್ರೆ ಸುದೀಪ್ ತಮ್ಮ ಸಿನಿಮಾಗಳಿಗಿಂತ ಸಖತ್ ಹಂಕ್ ಲುಕ್ನಲ್ಲಿ ಕಾಣಿಸಿಕೊಂಡಿರೋದು ನಿಜಕ್ಕೂ ಹೊಸತನದಿಂದ ಕೂಡಿದೆ.
ಕಿಚ್ಚನ ಜೊತೆ ನಿರೂಪ್ ಭಂಡಾರಿ ಹಾಗೂ ನೀತು ಅಶೋಕ್ ಪಾತ್ರದಲ್ಲಿ ಸಸ್ಪೆನ್ಸ್ ಇದೆ. ಅದು ಏನು ಅಂತಾ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ರಿವೀಲ್ ಆಗುತ್ತದೆ. ಇದು ವಿಕ್ರಾಂತ್ ರೋಣ ಹೈಲೆಟ್ಸ್. ನಿರ್ದೇಶಕ ಅನೂಪ್ ಭಂಡಾರಿ ಬಳಿಕ ಚಿತ್ರವನ್ನ ಹೆಗಲ ಮೇಲೆ ಹೊತ್ತಿರುವವರು ಕಲಾ ನಿರ್ದೇಶಕ ಶಿವಕುಮಾರ್ ಹಾಗೂ ಕ್ಯಾಮರಮ್ಯಾನ್ ಡೇವಿಡ್ ವಿಲಿಯಂ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವಿಕ್ರಾಂತ್ ರೋಣ ಚಿತ್ರದ ಹಿಂದೆ ಇರುವ ಕೈಗಳು ಎಂದರೆ ತಪ್ಪಿಲ್ಲ.
ಸುದೀಪ್ ಅಲ್ಲದೇ ಚಿತ್ರದಲ್ಲಿ ರವಿಶಂಕರ್ ಗೌಡ, ವಾಸುಕಿ ವೈಭವ್, ರಮೇಶ್ ಕುಕ್ಕುವಲ್ಲಿ, ಚಿತ್ಕಲಾ ಬಿರಾದಾರ್ ಗಮನ ಸೆಳೆಯುತ್ತಾರೆ. ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಒಂದು ಸೀನ್ ಚೆನ್ನಾಗಿ ಡೈಲಾಗ್ ಹೊಡೆಯುವ ಜೊತೆಗೆ, ರಾ ರಾ ರಕ್ಕಮ್ಮ ಹಾಡಿನಲ್ಲಿ ಸಖತ್ ಆಗಿ ಹೆಜ್ಜೆ ಹಾಕಿದ್ದು, ಅಭಿಮಾನಿಗಳಿಂದ ಈ ಹಾಡಿಗೆ ಸಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.
ಬಹುಕೋಟಿ ವೆಚ್ಚದಲ್ಲಿ ನಿರ್ಮಾಪಕ ಜಾಕ್ ಮಂಜು ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಸಾಕಷ್ಟು ಹೈಲೆಟ್ಸ್ಗಳಿಗೆ ಕಾರಣವಾಗಿರೋ ಪೈಸಾ ವಸೂಲ್ ಎಂಟರ್ಟೈನ್ ಮೆಂಟ್ ಸಿನಿಮಾ ಅಂತಾ ಹೇಳಬಹುದು.
ಇದನ್ನೂ ಓದಿ: ಎಲ್ಲೆಲ್ಲೂ 'ವಿಕ್ರಾಂತ್ ರೋಣ' ಅಬ್ಬರ.. ಅಭಿನಯ ಚಕ್ರವರ್ತಿಗೆ ಜೈಕಾರ