ಹೈದರಾಬದ್(ತೆಲಂಗಾಣ) : ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಜೊತೆಯಾಗಿ ನಟಿಸಲಿರುವ ಹೊಸ ಚಿತ್ರಕ್ಕೆ ಶೀರ್ಷಿಕೆ ಅನೌನ್ಸ್ ಆಗಿದೆ. ಈ ಚಿತ್ರಕ್ಕೆ ಕಾಲಿವುಡ್ ಟಾಪ್ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಚಿತ್ರಕ್ಕೆ 'ಜೈಲರ್' ಎಂದು ಟೈಟಲ್ ಇಡಲಾಗಿದೆ. ನಿರ್ಮಾಣ ಸಂಸ್ಥೆಯಾಗಿರುವ ‘ಸನ್ ಪಿಕ್ಚರ್ಸ್’ ಮೂಲಕ ಈ ಸುದ್ದಿ ಅಧಿಕೃತವಾಗಿ ಹೊರಬಿದ್ದಿದೆ. ರಜನಿಕಾಂತ್ ಅವರ 169ನೇ ಚಿತ್ರ ಇದಾಗಿದ್ದು, ಚಿತ್ರದ ಶೀರ್ಷಿಕೆಯ ಫಸ್ಟ್-ಲುಕ್ ಅನಾವರಣಗೊಳಿಸಲಾಗಿದೆ.
ಇದನ್ನೂ ಓದಿ: ರಜನಿಕಾಂತ್ ಬಳಿಕ ಈ ನಟನ ಜೊತೆ ಹ್ಯಾಟ್ರಿಕ್ ಹೀರೋಗೆ ಅಭಿನಯಿಸುವ ಆಸೆಯಂತೆ!
ಸೀಲಿಂಗ್‌ನಿಂದ ನೇತಾಡುವ ರಕ್ತದ ಕಲೆಯ ಕತ್ತಿಯನ್ನು ಒಳಗೊಂಡಿದ್ದು, ಸಿನಿ ರಸಿಕರಲ್ಲಿ ಕೌತುಕ ಮೂಡಿಸಿದೆ. ಹೊರಬಿದ್ದ ಟೈಟಲ್ ಪೋಸ್ಟರ್ ಪ್ರಕಾರ, ಜೈಲರ್ ಆ್ಯಕ್ಷನ್ ಸಿನಿಮಾ ಆಗಿದೆ. ಖ್ಯಾತ ನಿರ್ದೇಶಕ ಅನಿರುದ್ಧ ರವಿಚಂದರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಬೀಸ್ಟ್ ಸಿನಿಮಾದಿಂದ ಪಾಠ ಕಲಿತಿರುವ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್, ಈ ಚಿತ್ರದ ಮೂಲಕ ಮತ್ತೆ ಪುಟಿದೇಳುವ ವಿಶ್ವಾಸದಲ್ಲಿದ್ದಾರೆ. ಬೀಸ್ಟ್ ಚಿತ್ರಕ್ಕೂ ಮುನ್ನ ಹಲವು ಹಿಟ್ ಚಿತ್ರಗಳನ್ನು ನೀಡಿದ್ದ ನೆಲ್ಸನ್, ಇದೇ ಮೊದಲ ಬಾರಿಗೆ ರಜನಿಕಾಂತ್ ಅವರಿಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
ಚಿತ್ರಕ್ಕೆ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರು ನಾಯಕಿ ಆಗಿ ನಟಿಸಲಿದ್ದಾರೆ ಎಂದು ವರದಿ ಆಗಿದೆ. ಇವರ ಜೊತೆಗೆ ಶಿವಕಾರ್ತಿಕೇಯನ್, ಪ್ರಿಯಾಂಕಾ ಅರುಲ್ ಮೋಹನ್, ರಮ್ಯಾ ಕೃಷ್ಣನ್ ಮತ್ತು ಯೋಗಿ ಬಾಬು ಸೇರಿದಂತೆ ದೊಡ್ಡ ತಾರಾ ಬಳಗವೇ ಪರದೆ ಹಂಚಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಚಿತ್ರತಂಡ ಅವರೊಂದಿಗೆ ಮಾತುಕತೆ ನಡೆಸಿದೆಯಂತೆ.
ಇನ್ನು ರಜನಿಕಾಂತ್ ಅವರೊಂದಿಗೆ ಕನ್ನಡದ ಸೂಪರ್‌ಸ್ಟಾರ್ ಶಿವರಾಜ್‌ಕುಮಾರ್ ಅವರು ಸಹ ನಟಿಸುತ್ತಿರುವುದು ಸಿನಿ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಟಾಕ್ ಆಗುತ್ತಿದೆ. ತಮಿಳು ಸೂಪರ್ ಸ್ಟಾರ್ ನಟರ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಗಾಂಧಿನಗರದಲ್ಲಿ ಕೇಳಿ ಬಂದಿತ್ತು. ಈ ಮಾತೀಗ ನಿಜವಾಗಿದೆ. ಶೀಘ್ರದಲ್ಲೇ ಬೆಂಗಳೂರು ಅಥವಾ ಮೈಸೂರಿನಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಸಿದ್ಧತೆ ಮಾಡಿಕೊಂಡಿದೆಯಂತೆ.
ಇದನ್ನೂ ಓದಿ: ರಜನಿಕಾಂತ್ ಜೊತೆ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ ಶಿವರಾಜ್‌ಕುಮಾರ್