ಹೈದರಾಬಾದ್(ತೆಲಂಗಾಣ): ತೆಲುಗು ಬಿಗ್ ಬಾಸ್ ಸೀಸನ್-7ರ ವಿನ್ನರ್ ಪಲ್ಲವಿ ಪ್ರಶಾಂತ್ ಅವರು ಬಂಧನ ಭೀತಿ ಎದುರಾಗಿದೆ. ಇದೇ ಕಾರಣದಿಂದ ಅವರು ತಲೆಮರೆಸಿಕೊಂಡಿದ್ದಾರೆ. ನಿರೀಕ್ಷಣಾ ಜಾಮೀನು ಪಡೆಯಲು ವಕೀಲರು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ, ಎಫ್‌ಐಆರ್ ಪ್ರತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ರೈತನ ಮಗ ಪಲ್ಲವಿ ಪ್ರಶಾಂತ್ ಬಿಗ್ ಬಾಸ್ಗೆ ಎಂಟ್ರಿ ಕೊಡುವ ಮೂಲಕ ಗಮನ ಸೆಳೆದಿದ್ದರು. ಅಲ್ಲದೇ, ಇತ್ತೀಚೆಗೆ ವಿನ್ನರ್ ಆಗಿ ಹೊರಹೊಮ್ಮುವ ಮೂಲಕ ಸಂಚಲನ ಮೂಡಿಸಿದ್ದರು. ಇದರೊಂದಿಗೆ ದೇಶಾದ್ಯಂತ ಸದ್ದು ಕೂಡ ಮಾಡಿದ್ದರು. ಬಿಗ್ ಬಾಸ್ ಮುಗಿಸಿದ ನಂತರ ಅನ್ನಪೂರ್ಣ ಸ್ಟುಡಿಯೋದಿಂದ ಪ್ರಶಾಂತ್ ಹೊರ ಬರುವಾಗ ಅವರನ್ನು ಸ್ವಾಗತಿಸಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಇದೇ ಸಮಯದಲ್ಲಿ ಮೆರವಣಿಗೆ ನಡೆಸುವಾಗ ಬೆಂಬಲಿಗರ ನಡುವೆ ಹೊಡೆದಾಟವೂ ನಡೆದಿತ್ತು.
ಇದೀಗ ಈ ಗಲಾಟೆ ಸಂಬಂಧ ಪಲ್ಲವಿ ಪ್ರಶಾಂತ್ ವಿರುದ್ಧ ಜುಬ್ಲಿ ಹಿಲ್ಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಲ್ಲಿ ಎ-1 ಆರೋಪಿಯಾಗಿ ಅವರ ಹೆಸರನ್ನೇ ಸೇರಿಸಿದ್ದಾರೆ. ಪೊಲೀಸ್ ಕೇಸ್ ದಾಖಲಾಗುತ್ತಿದ್ದಂತೆ ಪಲ್ಲವಿ ಪ್ರಶಾಂತ್ ಅಜ್ಞಾತವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ಪಲ್ಲವಿ ಪ್ರಶಾಂತ್ ಪರ ವಕೀಲರು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಎಫ್‌ಐಆರ್ ಪ್ರತಿ ಪಡೆಯಲು ಠಾಣೆಗೆ ವಕೀಲರು ತೆರಳಿದ್ದರು. ಆದರೆ, ಎಫ್‌ಐಆರ್ ಪ್ರತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ ಎಂದು ವಕೀಲ ರಾಜ್ಕುಮಾರ್ ಆರೋಪಿಸಿದ್ದಾರೆ.
ಸಂಪೂರ್ಣ ಘಟನೆಯ ವಿವರ: ಭಾನುವಾರ ರಾತ್ರಿ ಬಿಗ್ ಬಾಸ್ ಸೀಸನ್ 7ರ ಫೈನಲ್ ನಂತರ ವಿಜೇತೆ ಪಲ್ಲವಿ ಪ್ರಶಾಂತ್ ಅಭಿಮಾನಿಗಳು ಮೆರವಣಿಗೆ ನಡೆಸಿದ್ದರು. ಬೆಂಬಲಿಗರು ಮತ್ತು ಮತ್ತೋರ್ವ ಸ್ಪರ್ಧಿ ಅಮರದೀಪ್ ನಡುವೆ ವಾಗ್ವಾದ ಜರುಗಿತ್ತು. ಇದರಿಂದ ಕೋಪಗೊಂಡ ಕೆಲವರು ಅಮರದೀಪ್ ಕಾರಿನ ಮೇಲೆ ಕಲ್ಲು ತೂರಾಟಕ್ಕೂ ಯತ್ನಿಸಿದ್ದರು.
ಅಲ್ಲದೇ, ಮತ್ತೊಬ್ಬ ಸ್ಪರ್ಧಿ ಅಶ್ವಿನಿ ಕಾರಿನ ಗಾಜುಗಳಿಗೂ ಹಾನಿಯಾಗಿತ್ತು. ಪಂಜಗುಟ್ಟಾ ಎಸಿಪಿ ಕಾರು, ಪೊಲೀಸ್ ಬಸ್ ಹಾಗೂ ಐದಕ್ಕೂ ಹೆಚ್ಚು ಸಾರಿಗೆ ಬಸ್ಗಳ ಗಾಜುಗಳನ್ನೂ ಒಡೆಯಲಾಗಿತ್ತು. ಮೆರವಣಿಗೆ ನಡೆಸುತ್ತಿದ್ದಂತೆ ಪೊಲೀಸರು ಪಲ್ಲವಿ ಪ್ರಶಾಂತ್ ಬೆಂಬಲಿಗರಿಗೆ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆ ಲೆಕ್ಕಿಸದೆ ಮೆರವಣಿಗೆ ಮಾಡಲಾಗಿತ್ತು.
ಹೀಗಾಗಿ ಅನುಮತಿ ಪಡೆಯದೆ ಮೆರವಣಿಗೆ ನಡೆಸಿದ್ದಕ್ಕಾಗಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಇದರಲ್ಲಿ ಪಲ್ಲವಿ ಪ್ರಶಾಂತ್ ಎ-1 ಆರೋಪಿಯಾದರೆ, ಸಹೋದರ ಮನೋಹರ್ ಎ-2 ಮತ್ತು ಸ್ನೇಹಿತ ವಿನಯ್ ಎ-3 ಆರೋಪಿಯಾಗಿ ಹೆಸರಿಸಲಾಗಿದೆ. ಈಗಾಗಲೇ ಮನೋಹರ್, ವಿನಯ್ನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: 'ಬಿಗ್ ಬಾಸ್' ಟ್ರೋಫಿಗೆ ಮುತ್ತಿಟ್ಟ ರೈತನ ಮಗ: ಪ್ರಶಾಂತ್ ವಿನ್ನರ್, ಅಮರ್ದೀಪ್ ರನ್ನರ್