ಚೆನ್ನೈ (ತಮಿಳುನಾಡು): ತಮಿಳು ಕಿರುತರೆಯಲ್ಲಿ ಭಾರಿ ದುರಂತ ನಡೆದಿದೆ. ಪ್ಯಾಲಿಯೋ ಡಯಟ್‌ನಿಂದ ಜನಪ್ರಿಯ ಕಿರುತೆರೆ ನಟ ಭರತ್ ಕಲ್ಯಾಣ್ ಅವರ ಪತ್ನಿ ಪ್ರಿಯಾ (43) ಸಾವನ್ನಪ್ಪಿದ್ದಾರೆ.
ಭರತ್ ಕಲ್ಯಾಣ್ ದಿವಂಗತ ಕನ್ನಡದ ಖ್ಯಾತ ನಟ ಕಲ್ಯಾಣ್ ಕುಮಾರ್ ಅವರ ಪುತ್ರ. ಸದ್ಯ ಭರತ್ ಕಲ್ಯಾಣ್ ತಮಿಳು ಸಿನಿಮಾ ಮತ್ತು ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಕನ್ನಡದ ಜೆಂಟಲ್‌ಮ್ಯಾನ್, ಆದಿಲಕ್ಷ್ಮಿ ಪುರಾಣ ಚಿತ್ರಗಳಲ್ಲೂ ನಟಿಸಿರುವ ಭರತ್, ಪ್ರಸ್ತುತ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಭಾರತಿ ಕಣ್ಣಮ್ಮ ಎಂಬ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲದೇ, ಬಾಲ್ಯದಲ್ಲೂ ಕನ್ನಡ ಚಿತ್ರಗಳಲ್ಲಿ ಭರತ್ ಕಲ್ಯಾಣ್ ನಟಿಸಿದ್ದರು.
ಕಳೆದ 3 ತಿಂಗಳಿಂದ ಭರತ್ ಕಲ್ಯಾಣ್ ಅವರ ಪತ್ನಿ ಪ್ರಿಯಾ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಮಧುಮೇಹ ಸಹ ಇತ್ತು. ಚಿಕಿತ್ಸೆ ಪಡೆಯುತ್ತಿರುವಾಗಲೇ ತೂಕ ಇಳಿಸಿಕೊಳ್ಳಲು ಅವರು ಪ್ಯಾಲಿಯೋ ಡಯಟ್ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಇದೇ ಡಯಟ್‌ನಿಂದ ಪ್ರಿಯಾ ಅವರ ಆರೋಗ್ಯವು ಮತ್ತಷ್ಟು ಹದಗೆಟ್ಟಿತ್ತು. ಇದರ ನಡುವೆ ಸೋಮವಾರ ಮೃತಪಟ್ಟಿದ್ದು, ಇಂದು ಅಂತ್ಯಕ್ರಿಯೆ ನೆರವೇರಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ನಟಿ ರಂಭಾ ಕಾರು ಅಪಘಾತ: ಮಗಳ ಚೇತರಿಕೆಗೆ ಪ್ರಾರ್ಥಿಸುವಂತೆ ಅಭಿಮಾನಿಗಳನ್ನು ಕೇಳಿಕೊಂಡ ತಾರೆ