ಸ್ಯಾಂಡಲ್ವುಡ್ನಲ್ಲಿ 'ಗಂಟುಮೂಟೆ', 'ಟಾಮ್ ಅಂಡ್ ಜೆರ್ರಿ' ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಯುವ ನಟ ನಿಶ್ಚಿತ್ ಕೊರೋಡಿ. ಸದ್ಯ 'ಸಪ್ಲೈಯರ್ ಶಂಕರ' ಸಿನಿಮಾ ವಿಚಾರವಾಗಿ ಬ್ಯುಸಿಯಾಗಿದ್ದಾರೆ. ಸದ್ದಿಲ್ಲದೇ ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಜ್ಜಾಗಿದೆ. ಇದೀಗ ಚಿತ್ರತಂಡ 'ಸಪ್ಲೈಯರ್ ಶಂಕರ' ಸಿನಿಮಾದ ಮೋಷನ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದೆ.
ಪೊಲೀಸ್ ಸ್ಟೇಷನ್ ದೃಶ್ಯದ ಮೂಲಕ ತೆರೆದುಕೊಳ್ಳುವ ಮೋಷನ್ ಪೋಸ್ಟರ್ ನಾನಾ ಕುತೂಹಲವನ್ನು ಹುಟ್ಟುಹಾಕಿದೆ. ರಕ್ತ ಮೆತ್ತಿದ ಅವತಾರದಲ್ಲಿ ಮಾಸ್ ಲುಕ್ನಲ್ಲಿ ನಟ ನಿಶ್ಚಿತ್ ಕೊರೋಡಿ ಕಾಣಿಸಿಕೊಂಡಿದ್ದಾರೆ. ಯುವ ಪ್ರತಿಭೆ ರಂಜಿತ್ ಸಿಂಗ್ ರಜಪೂತ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಿಶ್ಚಿತ್ ಕೊರೋಡಿಗೆ ಜೋಡಿಯಾಗಿ ಲಗೋರಿ ಸಿನಿಮಾ ಖ್ಯಾತಿಯ ದೀಪಿಕಾ ಆರಾಧ್ಯ ನಟಿಸಿದ್ದಾರೆ.
ಬಾರ್ ಸಪ್ಲೈಯರ್ ಕುರಿತ ಕಥೆಯಿದು.. ಇವರಲ್ಲದೇ ಗೋಪಾಲ ಕೃಷ್ಣ ದೇಶಪಾಂಡೆ, ಜ್ಯೋತಿ ರೈ, ನವೀನ್ ಡಿ ಪಡೀಲ್ ಸೇರಿದಂತೆ ಒಂದಿಷ್ಟು ಹೊಸಬರು ಕೂಡ ಈ ಚಿತ್ರದಲ್ಲಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾದ ಟೈಟಲ್ ಹೇಳುವಂತೆ ಒಬ್ಬ ಬಾರ್ ಸಪ್ಲೈಯರ್ ಸುತ್ತಾ ಇಡೀ ಕಥೆ ಸುತ್ತುತ್ತದೆ. 'ಸಪ್ಲೈಯರ್ ಶಂಕರ' ಸಿನಿಮಾಗೆ ರಂಜಿತ್ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ಸಾಹಿತ್ಯದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಇದನ್ನೂ ಓದಿ: Vamana: ಧನ್ವೀರ್ ನಟನೆಯ 'ವಾಮನ' ಚಿತ್ರದ ಆಕ್ಷನ್ ಟೀಸರ್ ರಿಲೀಸ್
ಚಿತ್ರತಂಡ ಹೀಗಿದೆ.. ಚಿತ್ರದ ಹಾಡುಗಳಿಗೆ ಕನ್ನಡದ ಖ್ಯಾತ ಗಾಯಕ ವಿಜಯ ಪ್ರಕಾಶ್, ಅಮ್ಮಾ ನನ್ನೀ ಜನುಮ ಖ್ಯಾತಿಯ ಸುನಿಲ್ ಕಶ್ಯಪ್, ಮೋಹನ್ ಬಿನ್ನಿಪೇಟೆ, ಸಂತೋಷ್ ವೆಂಕಿ, ನಕುಲ್ ಅಭಯ್ಯಂಕರ್, ಐಶ್ವರ್ಯಾ ರಂಗರಾಜನ್ ಧ್ವನಿಯಾಗಿದ್ದಾರೆ. ರವಿ ಬಸ್ರೂರ್ ಬಳಿ ಕೆಲಸ ಮಾಡಿರುವ ಆರ್.ಬಿ ಭರತ್ ಸಂಗೀತ ನೀಡಿದ್ದಾರೆ. ಇನ್ನೂ 'ಸಪ್ಲೈಯರ್ ಶಂಕರ' ಚಿತ್ರಕ್ಕೆ ಸತೀಶ್ ಚಂದ್ರಯ್ಯ ಸಂಕಲನ, ಸತೀಶ್ ಕುಮಾರ್ ಎ ಛಾಯಾಗ್ರಹಣ, ಬಾಲಾಜಿ ಕಲಾ ನಿರ್ದೇಶನವಿದೆ. ತ್ರಿನೇತ್ರ ಫಿಲಂಸ್ ಸಂಸ್ಥೆಯಡಿ ಎಂ ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಕನ್ನಡದಲ್ಲಿ ಅನೇಕ ಹೊಸ ಸಿನಿಮಾಗಳು ಬಿಡುಗಡೆ ಹೊಸ್ತಿಲಿನಲ್ಲಿದೆ. ಅದರಲ್ಲೂ ಯುವ ಪ್ರತಿಭೆಗಳ ಚಿತ್ರಕ್ಕೆ ಸ್ಯಾಂಡಲ್ವುಡ್ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ವಿಭಿನ್ನ ಕಥಾಹಂದರ ಹೊಂದಿರುವ ಅನೇಕ ಸಿನಿಮಾಗಳು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿವೆ. ಈ ಚಿತ್ರಗಳ ಸಾಲಿಗೆ 'ಸಪ್ಲೈಯರ್ ಶಂಕರ' ಕೂಡ ಸೇರಲಿದೆ. ಒಂದೊಳ್ಳೆ ಕಥೆಯನ್ನು ಇಟ್ಟುಕೊಂಡಿರುವ ಈ ಚಿತ್ರ ಹಿಟ್ ಸಾಲಿಗೆ ಸೇರಲಿದೆ ಅನ್ನೋ ವಿಶ್ವಾಸ ಚಿತ್ರ ತಂಡಕ್ಕಿದೆ.
ಇದನ್ನೂ ಓದಿ: ಅಣ್ಣಾವ್ರ ಕುಟುಂಬದ ಮತ್ತೊಂದು ಕುಡಿ ಬೆಳ್ಳಿ ತೆರೆಗೆ ಎಂಟ್ರಿ, ಯಾರು ಗೊತ್ತಾ?