ಬಾಲಿವುಡ್ ನಟ ಸನ್ನಿ ಡಿಯೋಲ್ ನಟನೆಯ 'ಗದರ್ 2' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಅನಿಲ್ ಶರ್ಮಾ ನಿರ್ದೇಶನದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ವಾರದ ದಿನಗಳಲ್ಲಿಯೂ ಸಿನಿ ಪ್ರೇಮಿಗಳನ್ನು ಥಿಯೇಟರ್ ಕಡೆಗೆ ಸೆಳೆಯುವಲ್ಲಿ 'ಗದರ್ 2' ಯಶಸ್ವಿಯಾಗಿದೆ. ಕಲೆಕ್ಷನ್ ವಿಚಾರದಲ್ಲೂ ವೇಗದ ಓಟ ಮುಂದುವರೆಸಿದ್ದು, ಈಗಾಗಲೇ 300 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ. ಈ ಮಧ್ಯೆ ಸನ್ನಿ ಡಿಯೋಲ್ಗೆ ಸಂಬಂಧಿಸಿದ ಶಾಕಿಂಗ್ ವಿಚಾರವೊಂದು ಹೊರಬಿದ್ದಿದೆ.
ಸನ್ನಿ ಡಿಯೋಲ್ ಅವರ ಮುಂಬೈ ವಿಲ್ಲಾವನ್ನು ಬ್ಯಾಂಕ್ ಆಫ್ ಬರೋಡಾ ಹರಾಜಿಗೆ ಹಾಕಿದೆ. 55 ಕೋಟಿ ಲೋನ್ ಹಾಗೂ ಅದರ ಬಡ್ಡಿಯನ್ನು ಪಾವತಿಸದ ಹಿನ್ನೆಲೆಯಲ್ಲಿ ಮುಂಬೈನ ಜುಹುವಿನಲ್ಲಿರುವ 'ಸನ್ನಿ ವಿಲ್ಲಾ'ವನ್ನು ಹರಾಜು ಹಾಕಲಾಗಿದೆ. ಹರಾಜು ನೊಟೀಸ್ ಅನ್ನು ಬ್ಯಾಂಕ್ ಆಫ್ ಬರೋಡಾ ಭಾನುವಾರ ರಾಷ್ಟ್ರೀಯ ಸುದ್ದಿ ಪತ್ರಿಕೆಯಲ್ಲಿ ಪ್ರಕಟಿಸಿದೆ. ಅದರಲ್ಲಿ ಸನ್ನಿ ಅವರ ವಿಲ್ಲಾದ ಸಾಲದ ವಿವರಗಳನ್ನು ನೀಡಲಾಗಿದೆ. ಜೊತೆಗೆ ಸೆಪ್ಟಂಬರ್ 25 ರಂದು ಜುಹು ಆಸ್ತಿಯ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಈ ಮೂಲಕ ತಿಳಿಸಿದೆ.
ಈಗಾಗಲೇ ಸ್ಟಾರ್ ನಟ 'ಗದರ್ 2' ಸಿನಿಮಾ ಯಶಸ್ಸಿನ ಖುಷಿಯಲ್ಲಿದ್ದಾರೆ. 20 ವರ್ಷಗಳ ನಂತರ ಬಂದ ಈ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಈ ಮಧ್ಯೆ ಬ್ಯಾಂಕ್ ಆಫ್ ಬರೋಡಾ ಸನ್ನಿ ಡಿಯೋಲ್ಗೆ ಬಿಗ್ ಶಾಕ್ ನೀಡಿದೆ. ಆದರೆ ಸನ್ನಿ ಡಿಯೋಲ್ ಕುಟುಂಬ ಈ ಬಗ್ಗೆ ಯಾವುದೇ ಅಧಿಕೃತವಾದ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: 'ಗದರ್ 2' ನಿರೀಕ್ಷೆಗೂ ಮೀರಿ ಹಿಟ್: 4ನೇ ದಿನದಲ್ಲಿ ₹150 ಕೋಟಿ ದಾಟಿದ ಕಲೆಕ್ಷನ್
'ಗದರ್ 2' ಕಲೆಕ್ಷನ್: ಆಗಸ್ಟ್ 11 ರಂದು ಬಿಡುಗಡೆಯಾದ ಗದರ್ 2 ಚಿತ್ರ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಈವರೆಗೆ 300 ಕೋಟಿ ರೂ.ಗೂ ಹೆಚ್ಚು ಆದಾಯ ಗಳಿಸಿದೆ. ಟ್ರೇಡ್ ಪೋರ್ಟಲ್ ಸ್ಯಾಕ್ನಿಲ್ ಪ್ರಕಾರ, ಚಿತ್ರವು ಶನಿವಾರ 32 ಕೋಟಿ ರೂಪಾಯಿ ಸಂಗ್ರಹಿಸಿದೆ. ಗದರ್ 2 ಬಿಡುಗಡೆಯಾದ ಮೊದಲ ವಾರದಲ್ಲಿ 284.63 ಕೋಟಿ ಸಂಗ್ರಹಿಸಿತ್ತು. ಆರಂಭಿಕ ಅಂದಾಜಿನಂತೆ, 2ನೇ ಶನಿವಾರ (ಆಗಸ್ಟ್ 19) 9ನೇ ದಿನದಂದು ಭಾರತದಲ್ಲಿ 32 ಕೋಟಿ ಕೊಳ್ಳೆ ಹೊಡೆದಿದೆ. ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಚಿತ್ರದ ಒಟ್ಟು ಕಲೆಕ್ಷನ್ 336.13 ಕೋಟಿ ರೂ. ಆಗಿದೆ. ಈ ಚಿತ್ರ ಬಿಡುಗಡೆಯಾದ 3 ದಿನದಲ್ಲಿ 100 ಕೋಟಿ, ಐದು ದಿನದಲ್ಲಿ 200 ಕೋಟಿ ರೂ ಗಳಿಸಿತ್ತು. ಬಳಿಕ ಎಂಟನೇ ದಿನವಾದ ಶುಕ್ರವಾರ ಚಿತ್ರ 300 ಕೋಟಿ ಕ್ಲಬ್ ಸೇರಿತ್ತು.
'ಗದರ್ 2' 2001ರ ಗದರ್ ಚಿತ್ರದ ಮುಂದುವರಿದ ಭಾಗ. ಸನ್ನಿ ಡಿಯೋಲ್ ಮೊದಲ ಚಿತ್ರದಲ್ಲಿ ತಾರಾ ಸಿಂಗ್ ಎಂಬ ಟ್ರಕ್ ಡ್ರೈವರ್ ಪಾತ್ರ ನಿರ್ವಹಿಸಿದ್ದರೆ, ಅಮೀಶಾ ಪಟೇಲ್ ಸಕೀನಾ ಪಾತ್ರದಲ್ಲಿ ನಟಿಸಿದ್ದರು. ಗದರ್ 2 ಚಿತ್ರವನ್ನು ಝೀ ಸ್ಟುಡಿಯೋಸ್ ನಿರ್ಮಿಸಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹಿಟ್ ಬ್ಲಾಕ್‌ಬಸ್ಟರ್‌ಗಳಲ್ಲಿ ಈ ಸಿನಿಮಾವು ಒಂದಾಗಿದೆ. ಸನ್ನಿ ಮತ್ತು ಅಮೀಷಾ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಮೋಹಕವಾಗಿ ಕಂಡುಬಂದರೆ, ತಾರಾ ಸಿಂಗ್ ಸಾಹಸ ದೃಶ್ಯಗಳು ಪ್ರೇಕ್ಷಕರನ್ನು ಶಿಳ್ಳೆ ಹೊಡೆಯುವಂತೆ ಪ್ರೇರೇಪಿಸುತ್ತಿವೆ.
ಇದನ್ನೂ ಓದಿ: Gadar 2: ಹುಬ್ಬೇರಿಸುವಂತಿದೆ ಗದರ್ 2 ಕಲೆಕ್ಷನ್ - ಸೂಪರ್ಹಿಟ್ ಸಿನಿಮಾ ವೀಕ್ಷಿಸಿದ ಕಾರ್ತಿಕ್ ಆರ್ಯನ್