ಜೀವನದಲ್ಲಿ ಅದೆಷ್ಟೋ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾದವರ ಕುರಿತು ಬಯೋಪಿಕ್ ಮಾಡುವ ಟ್ರೆಂಡ್ ಶುರುವಾಗಿದೆ. ಇದರಿಂದ ಜನರಿಗೆ ಉತ್ತಮ ಸಂದೇಶ ನೀಡುವ ಜೊತೆಗೆ ನಿರ್ಮಾಪಕರ ಜೇಬು ಸಹ ತುಂಬಲಿದೆ. ಈಗಾಗಲೇ ಬಂದಿರುವ ಕೆಲ ಬಯೋಪಿಕ್ಗಳು ಹಿಟ್ ಆಗಿವೆ. ಆ ಸಾಲಿಗೆ ಕೈಗಾರಿಕೋದ್ಯಮಿ, ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರ ಬಯೋಪಿಕ್ ಕೂಡಾ ಸೇರಲಿದೆ. ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕಿ ಸುಧಾ ಕೊಂಗರ ಅವರು ಈ ಬಯೋಪಿಕ್ ನಿರ್ದೇಶಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರಸ್ತುತ, ಕಥೆಯ ಸಂಶೋಧನೆ ಕೆಲಸ ನಿರ್ಣಾಯಕ ಹಂತದಲ್ಲಿದೆ. 2023ರ ಅಕ್ಟೋಬರ್ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಈ ವರ್ಷಾರಂಭದಲ್ಲಿ ಚಿತ್ರವನ್ನು 'ಕೆ.ಜಿ.ಎಫ್' ನಿರ್ಮಾಪಕರಾದ ಹೊಂಬಾಳೆ ಫಿಲಂಸ್ ನಿರ್ಮಿಸಲಿದೆ ಎಂದು ಊಹಿಸಲಾಗಿತ್ತು. ಸುಧಾ ಕೊಂಗರ ಅವರು ನೈಜ ಘಟನೆಗಳನ್ನು ಆಧರಿಸಿದ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ಪ್ರೊಡಕ್ಷನ್ ಹೌಸ್ ಕಡೆಯಿಂದ ಮಾಹಿತಿ ಸಿಕ್ಕಿತ್ತು.
ಇತ್ತೀಚಿನ ಸಂದರ್ಶನವೊಂದರಲ್ಲಿ, ಸುಧಾ ಕೊಂಗರ ಅವರು ನಟ ಸೂರ್ಯ ಅವರೊಂದಿಗೆ ಬಯೋಪಿಕ್‌ನಲ್ಲಿ ಕೆಲಸ ಮಾಡುವುದಾಗಿ ಬಹಿರಂಗಪಡಿಸಿದ್ದರು. ಚಿತ್ರದಲ್ಲಿ ಸೂರ್ಯ ಅಥವಾ ಅಭಿಷೇಕ್ ಬಚ್ಚನ್ ನಾಯಕನಾಗಿ ನಟಿಸುತ್ತಾರೆಯೇ ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಚಿತ್ರ ತಯಾರಕರು ಮತ್ತು ರತನ್ ಟಾಟಾ ಅಧಿಕೃತ ದೃಢೀಕರಣವನ್ನು ನೀಡಬೇಕಾಗಿದೆ.
ಇದನ್ನೂ ಓದಿ: ಕಾಶ್ಮೀರದ ಸೌಂದರ್ಯಕ್ಕೆ ಮಾರು ಹೋದ ಚಿತ್ರರಂಗ.. ಪ್ರಕೃತಿಯ ಮೋಡಿಗೆ ಫಿದಾ
ಸುಧಾ ಕೊಂಗರ ಪ್ರಸ್ತುತ ತಮ್ಮ 2020ರ ತಮಿಳು ಬ್ಲಾಕ್‌ಬಸ್ಟರ್ 'ಸೂರರೈ ಪೊಟ್ರು'ನ ಹಿಂದಿ ರಿಮೇಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹಿಂದಿ ರಿಮೇಕ್‌ನಲ್ಲಿ ಅಕ್ಷಯ್ ಕುಮಾರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ಚಿತ್ರಕಥೆ ಸೇರಿದಂತೆ ಐದು ಪ್ರಶಸ್ತಿಗಳನ್ನು 'ಸೂರರೈ ಪೊಟ್ರು' ಗೆದ್ದುಕೊಂಡಿದೆ.