ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಂತರ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಕ್ರಿಕೆಟ್ ಮ್ಯಾಚ್ ಕರ್ನಾಟಕ ಚಲನಚಿತ್ರ ಕಪ್ (ಕೆಸಿಸಿ). ಕನ್ನಡ ಚಿತ್ರರಂಗದಲ್ಲಿ ತಾರೆಯರೆಲ್ಲ ಒಂದು ಎಂಬ ಒಗ್ಗಟ್ಟಿನ ಶಕ್ತಿ ಪ್ರದರ್ಶನ ಮಾಡುವ ಈ ಕೆಸಿಸಿ ಕ್ರಿಕೆಟ್ ಮ್ಯಾಚ್ ಮತ್ತೆ ಶುರುವಾಗಲು ವೇದಿಕೆ ಸಿದ್ಧವಾಗಿದೆ. ಮೊದಲ ಹಾಗೂ ಎರಡನೇ ಆವೃತ್ತಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕ ಹಿನ್ನೆಲೆ ಈಗ 3ನೇ ಸೀಸನ್ಗೆ ಭರ್ಜರಿ ತಯಾರಿ ನಡೆಯುತ್ತಿದೆ.
6 ತಂಡಗಳು: ಕಿಚ್ಚ ಸುದೀಪ್ ನೇತೃತ್ವದಲ್ಲಿ ಕೆಸಿಸಿ ಸೀಸನ್ 3 ಶುರುವಾಗಲಿದೆ. ಈ ಬಗ್ಗೆ ಮಾಹಿತಿ ನೀಡಲು ನಟ ಕಿಚ್ಚ ಸುದೀಪ್ ಮಾಧ್ಯಮಗೋಷ್ಟಿ ನಡೆಸಿದ್ದಾರೆ. "ಈ ಬಾರಿ ಕೆಸಿಸಿ ಸೀಸನ್-3 ಕ್ರಿಕೆಟ್ ಪಂದ್ಯಾವಳಿ ನಡೆಸಲು ಸಿದ್ಧತೆ ನಡೆಯುತ್ತಿದೆ. ಕರ್ನಾಟಕ ಚಲನಚಿತ್ರ ಕಪ್ ಟೂರ್ನಿಯಲ್ಲಿ ನಟ ಶಿವರಾಜ್ ಕುಮಾರ್, ಉಪೇಂದ್ರ, ಗಣೇಶ್, ಧನಂಜಯ್ ಆಡುತ್ತಿದ್ದಾರೆ. ಈ ಬಾರಿ ಕೂಡ 6 ತಂಡಗಳು ಇರುತ್ತವೆ. ಗಂಗಾ ವಾರಿಯರ್ಸ್, ಹೊಯ್ಸಳ ಈಗಲ್ಸ್, ಕದಂಬ ಲಯನ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್, ವಿಜಯನಗರ ಪೇಟ್ರಿಯಾಟ್ಸ್, ಓಡೆಯರ್ ಚಾರ್ಜರ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಈ ತಂಡಗಳ ನಾಯಕರು ಯಾರು ಯಾರು ಅಂತಾ ಸದ್ಯದಲ್ಲೇ ತಿಳಿಸಲಿದ್ದೇವೆ" ಎಂದು ನಟ ಸುದೀಪ್ ಹೇಳಿದರು.
ನಾವೆಲ್ಲರೂ ಒಂದೇ ಭಾವನೆ: "ನಮ್ಮ ಚಿತ್ರರಂಗದಲ್ಲಿ ಒಂದು ಸಣ್ಣ ಗ್ಯಾಪ್ ಇದೆ. ಆ ಗ್ಯಾಪ್ ಏನಂದ್ರೆ ನಾವೆಲ್ಲ ಒಂದು ಕಡೆ ಸೇರಲು ವೇದಿಕೆ ಇಲ್ಲ. ಕೆಸಿಸಿ ಮೂಲಕ ನಾವೆಲ್ಲ ಒಂದು ಕಡೆ ಸೇರುತ್ತೇವೆ. ನಮ್ಮ ಜತೆ ಮಾಧ್ಯಮದವರು ಕೂಡ ಕ್ರಿಕೆಟ್ ಆಡುತ್ತಾರೆ. ನಾವು ಮೈದಾನಕ್ಕೆ ಇಳಿದಾಗ ಸ್ಟಾರ್ ಅಂತಾ ಯಾರು ಇಲ್ಲ. ನಾವೆಲ್ಲ ಒಂದೇ ಎಂಬ ಭಾವನೆ ಮೂಡುತ್ತದೆ. ಇಲ್ಲಿ ನಟರು ಮಾತ್ರವಲ್ಲದೇ, ನಿರ್ದೇಶಕರು, ನಿರ್ಮಾಪಕರು, ಕ್ಯಾಮರಾ ಮ್ಯಾನ್ಗಳು, ತಂತ್ರಜ್ಞಾನರು, ಸಹ ಕಲಾವಿದರು ಆಡಲಿದ್ದಾರೆ. ಆಗ ನಮಗೆ ನಾವೆಲ್ಲರೂ ಒಂದೇ ಭಾವನೆ ಮೂಡುತ್ತದೆ" ಎಂದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮ್ಯಾಚ್: ಫೆಬ್ರವರಿ 11 ಹಾಗೂ 12 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಮ್ಯಾಚ್ ಜರುಗಲಿದೆ. ಈ ವರ್ಷ ಕೂಡ 6 ಜನ ಇಂಟರ್ ನ್ಯಾಷನಲ್ ಕ್ರಿಕೆಟ್ ಆಟಗಾರರು ಒಂದೊಂದು ತಂಡದಲ್ಲಿ ಆಡಲಿದ್ದಾರೆ. ಸ್ಟಾರ್ಗಳ ಜತೆ ಈ ಇಂಟರ್ ನ್ಯಾಷನಲ್ ಕ್ರಿಕೆಟ್ ಪ್ಲೇಯರ್ಸ್ ಆಡುತ್ತಿರುವುದು ಕನ್ನಡ ಸಿನಿಮಾ ಪ್ರಿಯರಿಗೆ ಹಾಗೂ ಕ್ರಿಕೆಟ್ ಪ್ರೇಮಿಗಳಿಗೆ ಸಂತಸದ ಸಂಗತಿ.
ಕಳೆದ ಎರಡು ವರ್ಷದಿಂದ ಕನ್ನಡ ಚಲನಚಿತ್ರ ಕಪ್ ಅದ್ಧೂರಿಯಾಗಿ ನಡೆಯುತ್ತಿರುವುದು ವಿಶೇಷ. ಈ ಬಾರಿಯ ತಂಡಗಳು ಸಿನಿಮಾ ಹಾಗೂ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆ ಜೊತೆಗೆ ಕ್ರೀಡಾ ಸ್ಫೂರ್ತಿ ತುಂಬಲು ಸಜ್ಜಾಗಿವೆ. ಮಾಧ್ಯಮಗೋಷ್ಟಿಯಲ್ಲಿ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಕೆ.ಆರ್. ಜಿ ಸ್ಟುಡಿಯೋ ಕಾರ್ತಿಕ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶಣೈ ಉಪಸ್ಥಿತರಿದ್ದರು.
ಇದನ್ನೂ ಓದಿ: ರಿಲ್ಯಾಕ್ಸ್ ಮೂಡ್ನಲ್ಲಿ ಕಿಚ್ಚ: ಸ್ನೇಹಿತರೊಂದಿಗೆ ಕ್ರಿಕೆಟ್ ಆಟ