ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸ್ಥಾನಕ್ಕಾಗಿ ಮತದಾನ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಫಿಲ್ಮ್ ಚೇಂಬರ್ ಪಕ್ಕದಲ್ಲಿರೋ ಗುರುರಾಜ ಕಲ್ಯಾಣ ಮಂಟಪದಲ್ಲಿ ಮತ ಚಲಾವಣೆಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 9 ಗಂಟೆಗೆ ಫಲಿತಾಂಶ ಹೊರಬೀಳಲಿದ್ದು, ಯಾರ ಪಾಲಿಗೆ ಅಧ್ಯಕ್ಷ ಗಾದಿ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಫಿಲ್ಮ್ಸ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ಭಾ.ಮಾ ಹರೀಶ್ ಹಾಗೂ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಇದು ಚಲನಚಿತ್ರ ವಾಣಿಜ್ಯ ಮಂಡಳಿ 64ನೇ ಚುನಾವಣೆ ಆಗಿದೆ. 3 ವರ್ಷಗಳ ನಂತರ ನಡೆಯುತ್ತಿರುವ ಚುನಾವಣೆ ಇದಾಗಿದೆ. ಕೊರೊನಾ ಕಾರಣಕ್ಕಾಗಿ 3 ವರ್ಷದಿಂದ ಚುನಾವಣೆ ನಡೆದಿರಲಿಲ್ಲ. ಹೀಗಾಗಿ ಈ ಬಾರಿ ಫಿಲ್ಮ್ ಚೇಂಬರ್ ಎಲೆಕ್ಷನ್ ರಂಗೇರಿದೆ.
ಯಾರಾಗಬಹುದು ಅಧ್ಯಕ್ಷ: ಫಿಲ್ಮ್ ಚೇಂಬರ್ನ ಅಧ್ಯಕ್ಷ ಸ್ಥಾನ ಯಾರ ಪಾಲಾಗಲಿದೆ ಎಂಬ ಕುತೂಹಲ ಸ್ಯಾಂಡಲ್ವುಡ್ನಲ್ಲಿ ಮನೆ ಮಾಡಿದೆ. ಚಿತ್ರರಂಗದ ಮೂರು ವಲಯಗಳಾದ ನಿರ್ಮಾಪಕ, ಪ್ರದರ್ಶಕ ಹಾಗೂ ವಿತರಕರ ವಲಯಗಳಿಂದ ಮತದಾನ ನಡೆಯಲಿದೆ. ಒಟ್ಟು 1800ಕ್ಕೂ ಹೆಚ್ಚು ಮತದಾರರು ಇಂದು ಮತ ಚಲಾಯಿಸಲಿದ್ದಾರೆ.
ಇದೇ ಮೊದಲ ಬಾರಿಗೆ, ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡಲಾಗುತ್ತಿದೆ. ಹೀಗಾಗಿ ಬೆಳಗ್ಗೆ 11 ಗಂಟೆಯಿಂದ 1 ಗಂಟೆ ತನಕ ವಾರ್ಷಿಕ ಸಭೆ ಹಾಗೂ ಚಿತ್ರೋದ್ಯಮದ ಪರಿಸ್ಥಿತಿಯ ಚರ್ಚೆ ಮಾಡಲಾಗುತ್ತಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಜಯರಾಜ್, ಉಪಾಧ್ಯಕ್ಷರಾದ ಉಮೇಶ್ ಬಣಕಾರ್, ಕಾರ್ಯದರ್ಶಿಗಳಾದ ಎನ್ .ಎಮ್ ಸುರೇಶ್, ಎ.ಗಣೇಶ್ ಹಾಗೂ ಪ್ರದರ್ಶಕರಾದ ಕೆವಿ ಚಂದ್ರಶೇಖರ್, ನರಸಿಂಹುಲು ಸಮ್ಮುಖದಲ್ಲಿ ಗುರುರಾಜ ಕಲ್ಯಾಣ ಮಂಟಪದಲ್ಲಿ 64ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಮಾಡಲಾಯಿತು.
ಹಲವರಿಂದ ಮತದಾನ: ಇದೇ ಮೊದಲ ಬಾರಿಗೆ ಶೇ. 75ರಷ್ಟು ಮತದಾನ ಆಗಿದೆ. ಹಿರಿಯ ನಟಿ ಲೀಲಾವತಿ, ನಟ ವಿನೋದ್ ರಾಜ್, ರಾಘವೇಂದ್ರ ರಾಜ್ ಕುಮಾರ್, ನಿರ್ಮಾಪಕ ಹಾಗೂ ಸಚಿವ ಮುನಿರತ್ನ, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ವಿಜಯ್ ಕಿರಂಗದೂರ್, ಜಯಣ್ಣ, ಜಾಕ್ ಮಂಜು, ಶೈಲೇಂದ್ರ ಬಾಬು, ಹಿರಿಯ ನಿರ್ದೇಶಕರಾದ ಎ.ಟಿ ರಘು, ಅನಂತ್ ಪಿ. ರಾಜ್, ಸುನೀಲ್ ಕುಮಾರ್ ದೇಸಾಯಿ, ಓಂ ಸಾಯಿ ಪ್ರಕಾಶ್, ಇಂದ್ರಜಿತ್ ಲಂಕೇಶ್, ನಟರಾದ ವಿಜಯ್ ರಾಘವೇಂದ್ರ, ನಟಿಯರಾದ ಜಯಮಾಲಾ, ಶೃತಿ, ಸುಮನ್ ನಗರಿಕರ್ ಸೇರಿದಂತೆ ಹಲವರು ಮತ ಚಲಾಯಸಿದರು.
ಇತರ ಸ್ಥಾನಕ್ಕೂ ಚುನಾವಣೆ: ಇನ್ನು ಉಪಾಧ್ಯಕ್ಷರ ಸ್ಥಾನಕ್ಕೆ ನಿರ್ಮಾಪಕರ ವಲಯದಿಂದ ಜೈ ಜಗದೀಶ್ ಹಾಗೂ ಕರಿಸುಬ್ಬು ಸ್ಪರ್ಧೆ ಮಾಡಿದ್ದಾರೆ. ಉಪಾಧ್ಯಕ್ಷರ ಸ್ಥಾನಕ್ಕೆ ವಿತರಕರ ವಲಯದಿಂದ ಜ್ಞಾನೇಶ್ವರ್ ಐತಾಳ್, ಹಾಗೂ ಶಿಲ್ಪ ಶ್ರೀನಿವಾಸ್ ಸ್ಪರ್ಧಿಸಿದ್ದಾರೆ. ಉಪಾಧ್ಯಕ್ಷ ಪ್ರದರ್ಶಕರ ವಲಯದಿಂದ ಕುಮಾರ್.ಜಿ.ಪಿ ಹಾಗೂ ರಂಗಪ್ಪ ನಡುವೆ ಸ್ಪರ್ಧೆ. ಖಜಾಂಚಿ ಸ್ಥಾನಕ್ಕೆ ಜಯಸಿಂಹ ಮುಸುರಿ ಹಾಗೂ ಸಿದ್ದರಾಜು ನಡುವೆ ಸ್ಪರ್ಧೆ ಇದೆ.
ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಸುಂದರ್ ರಾಜ್ ಹಾಗೂ ಕೆ.ಎಂ.ವಿರೇಶ್, ರಾಜೇಶ್ ಬ್ರಹ್ಮಾವರ್ ನಡುವೆ ಸ್ಫರ್ಧೆ ಏರ್ಪಟ್ಟಿದೆ. ಸಂಜೆ 7 ಗಂಟೆ ನಂತರ ಮತ ಎಣಿಕೆ ಶುರುವಾಗಲಿದ್ದು, 9 ಗಂಟೆಯೊಳಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರು ಯಾರು ಎಂಬುದು ಬಹಿರಂಗವಾಗಲಿದೆ.
ಓದಿ: ಬಾಕ್ಸ್ ಆಫೀಸ್ನಲ್ಲಿ ತೋಪೆದ್ದ 'ಧಾಕಡ್': ನಿರ್ಮಾಪಕ, ನಟಿ ಕಂಗನಾ ಕಂಗಾಲು