ಕನ್ನಡ ಚಿತ್ರರಂಗದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಇಹಲೋಕ ತ್ಯಜಿಸಿ ಒಂದು ತಿಂಗಳು ಸಮೀಪಿಸುತ್ತಿದೆ. ಯಾವುದೇ ಸುಳಿವಿಲ್ಲದೇ 'ಚಿನ್ನಾರಿಮುತ್ತನ ಚಿನ್ನ' ಬಾರದ ಲೋಕಕ್ಕೆ ಪಯಣಿಸಿದ್ದು, ವಿಜಯ್ ಬದುಕಲ್ಲಿ ಬರಸಿಡಿಲು ಬಡಿದಂತಾಗಿದೆ. ಅವರು ನೋವಿನಲ್ಲೇ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ. ಇಂದು ವಿಜಯ್ ಮತ್ತು ಸ್ಪಂದನಾರದ್ದು 16ನೇ ವರ್ಷದ ವಿವಾಹ ವಾರ್ಷಿಕೋತ್ಸವ. ಈ ದಿನದಂದು ಪತ್ನಿಯ ನೆನೆದು ವಿಜಯ್ ಭಾವನಾತ್ಮಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ವಿಜಯ್ ಭಾವುಕ ಪೋಸ್ಟ್: ವಿವಾಹ ವಾರ್ಷಿಕೋತ್ಸವದ ಸಲುವಾಗಿ ವಿಜಯ್ ಪತ್ನಿಯ ನೆನದು ಭಾವನಾತ್ಮಕ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಸ್ಪಂದನಾ ನೆನಪನ್ನು ಅಕ್ಷರ ರೂಪಕ್ಕಿಳಿಸಿದ್ದಾರೆ. "ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ.. ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ.. ಬದುಕನ್ನು ಕಟ್ಟಿ ಸರ್ವಸ್ವವಾದೆ.. ಉಸಿರಲ್ಲಿ ಬೆರೆತು ಜೀವಂತವಾದೆ.. ಮುದ್ದಾದ ನಗುವಿನಲ್ಲಿದ್ದ ಶಕ್ತಿ ಪರ್ವತದಷ್ಟು.. ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ" ಎಂದು ಪ್ರೀತಿಯ ಸಾಲುಗಳನ್ನು ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೂ ಮೊದಲು ವಿಜಯ್ ಪತ್ನಿ ಸ್ಪಂದನಾರನ್ನು ನೆನೆದು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದರು. ಮನಸ್ಸಿನಲ್ಲಿರುವ ನೋವನ್ನು ಅಕ್ಷರ ರೂಪಕ್ಕಿಳಿಸಿದ್ದರು. "ಸ್ಪಂದನಾ.. ಹೆಸರಿಗೆ ತಕ್ಕ ಜೀವ. ಉಸಿರಿಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ. ಬದುಕಿಗೆ ತಕ್ಕ ನಡೆ. ನಮಗೆಂದೇ ಮಿಡಿದೆ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದೂ ನಿನ್ನವ, ಕೇವಲ ನಿನ್ನವ.." ಎಂದು ಅಗಲಿದ ಪತ್ನಿಗಾಗಿ ಬರೆದುಕೊಂಡಿದ್ದರು.
ಇದನ್ನೂ ಓದಿ: ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ
ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ಅವರು ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ಗಳಲ್ಲೊಬ್ಬರಾಗಿದ್ದರು. ಸ್ಪಂದನಾ ಅವರು ನಿವೃತ್ತ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಮ್ ಅವರ ಮಗಳು. ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ಇಬ್ಬರು ಪರಸ್ಪರ ಪ್ರೀತಿಸಿ 2007ರಲ್ಲಿ ಹಿರಿಯರ ಒಪ್ಪಿಗೆಯೊಂದಿಗೆ ಮದುವೆ ಆಗಿದ್ದರು. ಸ್ಪಂದನಾ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ಅಪೂರ್ವ' ಸಿನಿಮಾದಲ್ಲಿ ಚಿಕ್ಕ ಪಾತ್ರವೊಂದರಲ್ಲಿ ಅಭಿನಯಿಸಿದ್ದರು.
ಸ್ಪಂದನಾ ನಿಧನ: ಆಗಸ್ಟ್ 6 ರಂದು ಸ್ಪಂದನಾರವರು ಹೃದಯಾಘಾತದಿಂದ ನಿಧನರಾದರು. ಬ್ಯಾಂಕಾಂಕ್ಗೆ ಸಂಬಂಧಿಕರೊಂದಿಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿತ್ತು. ಬಳಿಕ ವಿದೇಶದಲ್ಲೇ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿತ್ತು. ಆ ನಂತರ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಮೃತದೇಹವನ್ನು ಬೆಂಗಳೂರಿಗೆ ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಲ್ಲೇಶ್ವರಂನಲ್ಲಿನ ಸ್ಪಂದನಾ ತಂದೆ ಬಿ ಕೆ ಶಿವರಾಮ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆ ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ನಂತರ ಆಗಸ್ಟ್ 11 ರಂದು ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಲಾಗಿತ್ತು. ಪುತ್ರ ಶೌರ್ಯ ಅವರಿಗೆ ಪೂಜೆಗೂ ಮುನ್ನ ಕೇಶ ಮುಂಡನ ಮಾಡಿಸಲಾಗಿತ್ತು. ವಿಜಯ ರಾಘವೇಂದ್ರ ಅವರು ಪಿಂಡ ಪ್ರದಾನ, ನಕ್ಷತ್ರ ಹೋಮ ಸೇರಿದಂತೆ ಶ್ರಾದ್ಧಾ ವಿಧಿ-ವಿಧಾನ ನೆರವೇರಿಸಿದ ಬಳಿಕ ಅಸ್ಥಿ ವಿಸರ್ಜಿಸಿದ್ದರು.