ನಟ ಹಾಗೂ ಗಾಯಕ ದಿಲ್ಜಿತ್ ದೋಸಾಂಜ್ ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸೆರೆ ಹಿಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ಮಾಡಿರುವ ಕೆಲವು ಫೋಟೋಗಳಲ್ಲಿ ದಿಲ್ಜಿತ್ ದೋಸಾಂಜ್ ಜೊತೆಗೆ ಆಸ್ಟ್ರೇಲಿಯನ್ ಗಾಯಕಿ ಸಿಯಾ ಹಾಗೂ ಇನ್ನೂ ಕೆಲವು ಫೋಟೋಗಳಲ್ಲಿ ಅಮೆರಿಕನ್ ರೆಕಾರ್ಡ್ ನಿರ್ಮಾಪಕ ಗ್ರೆಗ್ ಕರ್ಸ್ಟಿನ್ ಇದ್ದಾರೆ. ಈ ಫೋಟೋಗಳನ್ನು ಗಮನಿಸಿದರೆ ಮೂವರು ಹೊಸ ಹಾಡೊಂದರ ರೆಕಾರ್ಡಿಂಗ್ಗೆ ಜೊತೆಯಾದ ಹಾಗಿದೆ.
ಬಂಚ್ ಆಫ್ ಫೋಟೋಗಳನ್ನು ಹಂಚಿಕೊಂಡಿರುವ ದಿಲ್ಜಿತ್ ದೋಸಾಂಜ್ ಅವರು "ಅನ್‌ಸ್ಟಾಪೆಬಲ್ ವೈಬ್ ಸಿಯಾ - ವಾಟ್ ಆನ್ ಎನರ್ಜಿ ಹ್ಯಾಪಿ ವೈಬ್" ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಒಂದು ಫೋಟೋದಲ್ಲಿ ದಿಲ್ಜಿತ್ ಮತ್ತು ಸಿಯಾ ತಬ್ಬಿಕೊಂಡು ಫೋಸ್ ನೀಡಿರುವುದನ್ನು ಗಮನಿಸಿಬಹುದು. ಇನ್ನೊಂದು ಚಿತ್ರದಲ್ಲಿ ಕ್ಯಾಮರಾದ ಕಡೆ ನೋಡಿ ನಕ್ಕಿರುವುದು ಕಂಡು ಬಂದಿದೆ. ದಿಲ್ಜಿತ್ ಕಪ್ಪು ಮತ್ತು ಕಂದು ಬಣ್ಣದ ಬಟ್ಟೆ ಧರಿಸಿ ನೀಲಿ ಪೇಟ ಧರಿಸಿದ್ದರೆ, ಸಿಯಾ ಹಸಿರು ಉಡುಗೆ ಮತ್ತು ವರ್ಣರಂಜಿತ ಕೂದಲಿನ ಪರಿಕರ ಧರಿಸಿದ್ದಾರೆ. ಅದೇ ಫೋಟೋಗಳನ್ನು ಸಿಯಾ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.
ಈಗಾಗಲೇ ಜೋಗಿ, ಗುಡ್ ನ್ಯೂಸ್ ಹಾಗೂ ಉಡ್ತಾ ಪಂಜಾಬ್‌ನಂತಹ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ದಿಲ್ಜಿತ್ ಈಗ ಅವರ ಮುಂಬರುವ ಚಿತ್ರ 'ಪಂಜಾಬ್ 95' ಬಿಡುಗಡೆಗೆ ರೆಡಿಯಾಗುತ್ತಿದೆ. ಚಿತ್ರದಲ್ಲಿ ದಿಲ್ಜಿತ್, ಮಾನವ ಹಕ್ಕುಗಳ ಪ್ರಚಾರಕ ಜಸ್ವಂತ್ ಸಿಂಗ್ ಖಲ್ರಾ ಪಾತ್ರವನ್ನು ನಿರ್ವಹಿಸಿದ್ದು, ಈ ವಾರದ ಆರಂಭದಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿತ್ತು. ಹನಿ ಟ್ರೆಹಾನ್ ಅವರು ಆ್ಯಕ್ಷನ್ ಕಟ್ ಹೇಳಿರುವ 'ಪಂಜಾಬ್ 95' ಸಿನಿಮಾದಲ್ಲಿ ಅರ್ಜುನ್ ರಾಂಪಾಲ್ ಮತ್ತು ಸುವಿಂದರ್ ವಿಕ್ಕಿ ಕೂಡ ಮಹತ್ವದ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈ ಸಿನಿಮಾದ ಹೊರತಾಗಿ ದಿಲ್ಜಿತ್ ಹಿಂದಿಯಲ್ಲಿ ಅವರ ಮುಂಬರುವ ಸಿನಿಮಾ ದಿ ಕ್ರೂನಲ್ಲಿ ಕರೀನಾ ಕಪೂರ್, ಕೃತಿ ಸನೋನ್ ಮತ್ತು ಟಬು ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಏಕ್ತಾ ಕಪೂರ್ ಮತ್ತು ರಿಯಾ ಕಪೂರ್ ಬಂಡವಾಳ ಹೂಡಿದ್ದಾರೆ. ಇದರ ಜೊತೆಗೆ ಇಮ್ತಿಯಾಜ್ ಅಲಿ ಅವರ ನಿರ್ದೇಶನದ ನೆಟ್‌ಫ್ಲಿಕ್ಸ್ ಚಲನಚಿತ್ರ 'ಚಮ್ಕಿಲಾ'ದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ದಿಲ್ಜಿತ್ಗೆ ಜೋಡಿಯಾಗಿ ಪರಿಣಿತಿ ಚೋಪ್ರಾ ನಟಿಸಿದ್ದಾರೆ. ಈ ಚಲನಚಿತ್ರವು ಪಂಜಾಬ್‌ನ ಕಲಾವಿದ ಅಮರ್ ಸಿಂಗ್ ಚಮ್ಕಿಲಾ ಮತ್ತು ಅವರ ಪತ್ನಿ, ಗಾಯಕಿ ಅಮರಜೋತ್ ಕೌರ್ ಅವರ ಕುರಿತಾಗಿದೆ.
ಇದನ್ನೂ ಓದಿ: ರಾಕಿ ರಾಣಿ ಲವ್ ಸ್ಟೋರಿ: ಆಲಿಯಾಗೆ ಸಪೋರ್ಟ್ ಮಾಡಲು ಬಂದ ರಣ್ಬೀರ್-ರಣ್ವೀರ್ ಜೊತೆ ದೀಪಿಕಾ ಇರಬೇಕಿತ್ತೆಂದ ಫ್ಯಾನ್ಸ್