ಏಷ್ಯಾದಲ್ಲಿ ಜನಪ್ರಿಯರಾಗಿದ್ದ ಹಾಂಗ್ ಕಾಂಗ್ ಮೂಲದ ಗಾಯಕಿ ಮತ್ತು ಗೀತರಚನೆಗಾರ್ತಿ ಕೊಕೊ ಲೀ (Coco Lee) ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜನಪ್ರಿಯ ಗಾಯಕಿ ಸಾವನ್ನಪ್ಪಿರುವ ವಿಚಾರವನ್ನು ಅವರ ಒಡಹುಟ್ಟಿದವರು ತಿಳಿಸಿದ್ದಾರೆ.
48ರ ಹರೆಯದ ಸ್ಟಾರ್ ಸುಮಾರು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಈ ಬಗ್ಗೆ ಕೊಕೊ ಲೀ ಅವರ ಹಿರಿಯ ಸಹೋದರಿಯರಾದ ಕರೋಲ್ ಮತ್ತು ನ್ಯಾನ್ಸಿ ಲೀ ಅವರು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅವರ ಸ್ಥಿತಿ ಹದಗೆಟ್ಟಿತ್ತು. ಸಮಸ್ಯೆ ಸರಿಪಡಿಸಲು, ಖಿನ್ನತೆಯ ವಿರುದ್ಧ ಹೋರಾಡಲು ತನ್ನ ಕೈಲಾದಷ್ಟು ಪ್ರಯತ್ನಿಸಿದರೂ ಕೂಡ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ತಿಳಿಸಿದ್ದಾರೆ. ಕೊನೆಯ ವಾರಾಂತ್ಯದಲ್ಲಿ ಅವರು ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಕೋಮಾ ಸ್ಥಿತಿಯಲ್ಲಿದ್ದ ಅವರು ಬುಧವಾರ ಮೃತಪಟ್ಟಿದ್ದಾರೆ ಎಂದು ಸಹೋದರಿಯರು ಮಾಹಿತಿ ನೀಡಿದ್ದಾರೆ.
ಕೊಕೊ ಲೀ ಹಾಂಗ್ ಕಾಂಗ್‌ನಲ್ಲಿ ಜನಿಸಿದ್ದರು. ವಿದ್ಯಾಭ್ಯಾಸಕ್ಕಾಗಿ ಯುಎಸ್‌ಗೆ ತೆರಳಿದ್ದರು. ಅಲ್ಲಿ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಶಾಲಾ ವ್ಯಾಸಂಗ ಮಾಡಿದರು. ಹಾಂಗ್ ಕಾಂಗ್‌ನಲ್ಲಿ ಬ್ರಾಡ್‌ಕಾಸ್ಟರ್ ಟಿವಿ ನಡೆಸಿದ ವಾರ್ಷಿಕ ಸಂಗೀತ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿ ಗೆದ್ದ ನಂತರ ಗಾಯನ ಕ್ಷೇತ್ರದಲ್ಲಿ ಗುರುತಿಸಿಕೊಂಡರು. 1994 ರಲ್ಲಿ ತಮ್ಮ 19ನೇ ವಯಸ್ಸಿನಲ್ಲಿಯೇ ಮೊದಲ ಆಲ್ಬಂ ಅನ್ನು ಬಿಡುಗಡೆ ಮಾಡಿದರು. ಸುಮಾರು 30 ವರ್ಷಗಳ ವೃತ್ತಿಜೀವನದಲ್ಲಿ ಕ್ಯಾಂಟೋನೀಸ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಆಲ್ಬಮ್‌ಗಳನ್ನು ಬಿಡುಗಡೆ ಮಾಡಿದರು. ತಮ್ಮ ದನಿ ಮತ್ತು ಲೈವ್ ಪ್ರದರ್ಶನಗಳಿಗೆ ಮೆಚ್ಚುಗೆ ಸಂಪಾದಿಸಿದ್ದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಿ ಗಾಯಕರಿಗೆ ಹೊಸ ಜಗತ್ತನ್ನು, ವಿಭಿನ್ನ ವೇದಿಕೆ ಸೃಷ್ಟಿಸಲು ಸಾಕಷ್ಟು ಕೆಲಸ ಮಾಡಿದ್ದಾರೆ. ಚೀನಿಯರಿಗಾಗಿ ತಮ್ಮ ಕೈಲಾದಷ್ಟು ಕೆಲಸ ಮಾಡಿದ್ದರು ಎಂದು ಅವರ ಸಹೋದರಿಯರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ''ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ, ಅಮೆರಿಕನ್ ಮಾರುಕಟ್ಟೆಯಲ್ಲಿ ಸದ್ದು ಮಾಡಿದ ಮೊದಲ ಚೀನಿ ಗಾಯಕಿಯೂ ಕೂಡ ಹೌದು'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Salaar: 400 ಕೋಟಿ ರೂಪಾಯಿ ವೆಚ್ಚ, 14 ಅದ್ಭುತ ಸೆಟ್‌ಗಳಲ್ಲಿ ಶೂಟಿಂಗ್! ಸಲಾರ್ ಸಿನಿಮಾ ನಿರ್ಮಾಣದ ರೋಚಕ ಮಾಹಿತಿ
ಕೊಕೊ ಲೀ ಕೊನೆಯದಾಗಿ 2022ರ ಡಿಸೆಂಬರ್ 31ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಶೇರ್ ಮಾಡಿದ್ದರು. ಆಪೋಸ್ಟ್‌ನಲ್ಲಿ, ಅವರು ತಮ್ಮ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದರು. ಇದರಲ್ಲಿ ಪ್ರೀತಿ ಮತ್ತು ನಂಬಿಕೆ ಎಂಬ ವಿಷಯಗಳ ಕುರಿತಾಗಿ ಅವರು ಬರೆದಿದ್ದರು.