ಖ್ಯಾತ ಪಂಜಾಬಿ ಗಾಯಕ ದಿವಂಗತ ಸಿಧು ಮೂಸೆವಾಲಾ ಅಭಿಮಾನಿಗಳಿಗೆ ಸಂತಸದ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಸಿಧು ಅವರ 'ಮೇರಾ ನಾಮ್' ಎಂಬ ಹೊಸ ಹಾಡು ಏಪ್ರಿಲ್ 7 ರಂದು ಬಿಡುಗಡೆಯಾಗಲಿದೆ. ಅದರ ಪೋಸ್ಟರ್ ಇದೀಗ ರಿಲೀಸ್ ಆಗಿದೆ. ಈ ಹಾಡನ್ನು ಬರ್ನಾ ಬಾಯ್ ಮತ್ತು ಸ್ಟೀಲ್ ಬ್ಯಾಂಗಲ್ಸ್ ಹಾಡಿದ್ದಾರೆ. ಸಿಧು ತಂದೆ ಬಲ್ಕೌರ್ ಸಿಂಗ್ ಮತ್ತು ತಾಯಿ ಹಾಡಿನ ಪೋಸ್ಟರ್ ಹಾಗೂ ಬಿಡುಗಡೆ ದಿನಾಂಕವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಸಿಧು ಮೂಸೆವಾಲಾ ಅವರ ಯಾವುದೇ ಹೊಸ ಹಾಡುಗಳು ಬಿಡುಗಡೆಗೊಂಡಿರಲಿಲ್ಲ. ಹೀಗಾಗಿ ಸಿಧು ಅಭಿಮಾನಿಗಳು ಅವರ ಹಾಡಿಗಾಗಿ ಕಾಯುತ್ತಿದ್ದರು. ಅದರಂತೆ ಕೊನೆಗೂ ಹಾಡು ಬಿಡುಗಡೆಯ ಡೇಟ್ ಅನೌನ್ಸ್ ಆಗಿದೆ. ಸಿಧು ನಿಧನದ ನಂತರ ರಿಲೀಸ್ ಆಗುತ್ತಿರುವ ಅವರ ಮೂರನೆಯ ಸಾಂಗ್ ಇದಾಗಿದೆ. ಅವರ ಎರಡು ಹಾಡುಗಳು ಎಸ್ವೈಎಲ್ ಮತ್ತು ವಾರ್ ಈ ಹಿಂದೆ ಬಿಡುಗಡೆಯಾಗಿದೆ.
ಅಭಿಮಾನಿಗಳ ಖುಷಿಗಾಗಿ ಸಿಧು ಅಗಲಿಕೆ ನಂತರದ ಮೂರನೇ ಹಾಡು 'ಮೇರಾ ನಾಮ್' ಅನ್ನು ಅವರ ಪೋಷಕರೇ ಏಪ್ರಿಲ್ 7 ರಂದು ಬಿಡುಗಡೆಗೊಳಿಸಲಿದ್ದಾರೆ. ಸ್ಟೀಲ್ ಬ್ಯಾಂಗಲ್ಸ್ ಅವರು 2022ರ ನವೆಂಬರ್ ನಲ್ಲಿ ಯುಕೆಗೆ ಭೇಟಿ ನೀಡಿದ್ದಾಗ ಸಿಧು ಅವರ ಪೋಷಕರನ್ನು ಭೇಟಿಯಾಗಿದ್ದರು. ಬಳಿಕ ಸಿಧು ಪೋಷಕರು ಮತ್ತು ಬರ್ನಾ ಬಾಯ್ ಜೊತೆಗಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಆಗಲೇ ಈ ಹೊಸ ಹಾಡಿನ ಬಗ್ಗೆ ಅವರು ಸುಳಿವು ನೀಡಿದ್ದರು.
ಸಿಧು ಅಗಲಿಕೆಯ ನಂತರ ಬಿಡುಗಡೆಯಾದ ಹಾಡುಗಳಿವು.. ಸಿಧು ಮೂಸೆವಾಲಾ ನಿಧನದ ನಂತರ ಅವರ ಎರಡು ಹಾಡುಗಳು ಬಿಡುಗಡೆಗೊಂಡಿವೆ. ಎಸ್ವೈಎಲ್ ಮತ್ತು ವಾರ್ ಎಂಬ ಎರಡು ಸಾಂಗ್ಸ್ ಈಗಾಗಲೇ ರಿಲೀಸ್ ಆಗಿವೆ. ಆದರೆ, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಎಸ್ವೈಎಲ್ ಹಾಡನ್ನು ಯೂಟ್ಯೂಬ್ನಿಂದ ತೆಗೆದುಹಾಕಲಾಗಿದೆ. ವಾರ್ ಯೂಟ್ಯೂಬ್ನಲ್ಲಿ ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟ ದಳಪತಿ ವಿಜಯ್: ಒಂದೇ ದಿನ 4 ಮಿಲಿಯನ್ಗೂ ಹೆಚ್ಚು ಫಾಲೋವರ್ಸ್!
ಗುಂಡಿಕ್ಕಿ ಸಿಧು ಹತ್ಯೆ: ಸಿಧು ಮೂಸೆವಾಲಾ ಹತ್ಯೆ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. 2022ರ ಮೇ 29 ರಂದು ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಅಪರಿಚಿತ ದುಷ್ಕರ್ಮಿಗಳು ಕಾಂಗ್ರೆಸ್ ನಾಯಕರೂ ಆಗಿದ್ದ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಸಿಧು ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿದ್ದು, ಗಾಯಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಪಂಜಾಬ್ ಪೊಲೀಸರು ಮೂಸೆವಾಲಾ ಸೇರಿದಂತೆ 424 ಜನ ಪ್ರಮುಖ ಪೊಲೀಸ್ ಭದ್ರತೆ ಹಿಂತೆಗೆದುಕೊಂಡ ಎರಡು ದಿನಗಳ ನಂತರ ಈ ಕೊಲೆ ನಡೆದಿತ್ತು. ಅದಾದ ನಂತರ ಅವರ ತಂದೆ ಬಲ್ಕೌರ್ ಸಿಂಗ್ ಅವರಿಗೂ ಕೊಲೆ ಬೆದರಿಕೆ ಬಂದಿತ್ತು.
ಇದನ್ನೂ ಓದಿ: ವೀಕೆಂಡ್ನಲ್ಲಿ ಉತ್ತಮ ಕಲೆಕ್ಷನ್ ಮಾಡಿದ 'ಭೋಲಾ': 50 ಕೋಟಿ ದಾಟುವ ನಿರೀಕ್ಷೆ