ಕನ್ನಡದ ಸೂಪರ್ ಹಿಟ್ ಸಿನಿಮಾ ಮಫ್ತಿ ಚಿತ್ರದಲ್ಲಿ ಕೇಳಿ ಬಂದ ಫುಲ್ ಪಾತ್ರದ ಹೆಸರು ಎಂದರೇ ಅದು ಭೈರತಿ ರಣಗಲ್. ಈ ಪಾತ್ರವನ್ನು ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅಭಿನಯಿಸಿರೋ ಅತ್ಯುತ್ತಮ ಪಾತ್ರಗಳಲ್ಲಿ ಒಂದು. ಖುದ್ದು ಶಿವಣ್ಣ ಹಿಂದೆ ಇದೇ ಮಾತನ್ನು ಒಪ್ಪಿಕೊಂಡಿದ್ದೂ ಇದೆ. ಪಾತ್ರ ಹಾಗೂ ಚಿತ್ರ ಎರಡಕ್ಕೂ ಜನಮನ್ನಣೆ ಸಿಗುತ್ತೆ ಎಂದು ಚಿತ್ರ ಮಾಡುವಾಗ ಕಲ್ಪನೆಯನ್ನೂ ಮಾಡಿಕೊಂಡಿರಲಿಲ್ಲ ಎಂದು ಹೇಳಿದ್ದು ಇದೆ.
![ಸರಳವಾಗಿ ಪೂಜೆಯನ್ನು ಮಾಡಿ ಮುಗಿಸಿದೆ ಚಿತ್ರತಂಡ.](https://etvbharatimages.akamaized.net/etvbharat/prod-images/18602526_thumb1.jpg)
ಭೈರತಿ ರಣಗಲ್ ಪಾತ್ರದ ಜೊತೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಶಿವಣ್ಣ, ಇದೀಗ ಇದೇ ಪಾತ್ರದ ಹೆಸರಿನಲ್ಲಿ ಭೈರತಿ ರಣಗಲ್ ಚಿತ್ರವನ್ನು ಆರಂಭ ಮಾಡಿದ್ದಾರೆ. ಇಂದು ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಗೀತಾ ಶಿವರಾಜ್ ಕುಮಾರ್ ಕ್ಲಾಪ್ ಮಾಡಿ, ಸರಳವಾಗಿ ಪೂಜೆ ಮಾಡಿ ಮುಗಿಸಿದೆ ಚಿತ್ರತಂಡ.
ಭೈರತಿ ರಣಗಲ್ ಮಫ್ತಿ ಚಿತ್ರದ ಮುಂದುವರೆದ ಭಾಗವಲ್ಲ. ಬದಲಿಗೆ ರೋಣಾಪುರ ಎಂಬ ಊರಿಗೆ ಗಣ ಪಾತ್ರಧಾರಿ ಶ್ರೀಮುರಳಿ ಬರುವ ಮುನ್ನ ಭೈರತಿ ರಣಗಲ್ ಬದುಕಿನ ಸುತ್ತ ಮುತ್ತ ನಡೆದ ಕಥೆ. ಸಿನಿಮಾ ಭಾಷೆಯಲ್ಲಿ ಭೈರತಿ ರಣಗಲ್ ಮಫ್ತಿ ಚಿತ್ರದ ಪ್ರಿಕ್ವೆಲ್. ಇನ್ನು ನಿಜ ಜೀವನದಲ್ಲಿ ಶಿವಣ್ಣಗೆ 62ರ ಪ್ರಾಯ. ಆದರೆ, ಬೈರತಿ ರಣಗಲ್ನಲ್ಲಿ ಶಿವಣ್ಣ 26ರ ಪ್ರಾಯದ ಯುವಕನ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಹೀಗಾಗಿ ನಾಯಕಿ ಯಾರು ಎಂಬ ಪ್ರಶ್ನೆ ಕಾಡುವುದು ಸಹಜ. ಆದರೆ ನಾಯಕಿಯ ಪಾತ್ರವನ್ನು ಕನ್ನಡದ ಹುಡುಗಿಯೇ ನಿರ್ವಹಿಸಬಹುದೇ? ಅಥವಾ ಪರಭಾಷೆ ನಟಿ ಬರಬಹುದೇ? ಎಂಬುದು ಇನ್ನು ಗೊತ್ತಿಲ್ಲ. ಏಕೆಂದರೆ ನಾಯಕಿಯ ಪಾತ್ರಕ್ಕೆ ಅನೇಕ ಭಾವನೆಗಳು ಈ ಚಿತ್ರದಲ್ಲಿವೆ. ಆ ಭಾವನೆಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವ ನಟಿಯ ಹುಡುಕಾಟವನ್ನು ಸದ್ಯಕ್ಕೆ ಶಿವಣ್ಣ ಹಾಗೂ ನಿರ್ದೇಶಕ ನರ್ತನ್ ಮಾಡುತ್ತಿದ್ದಾರೆ. ಸದ್ಯದಲ್ಲಿಯೇ ನಾಯಕಿ ಯಾರೆಂಬ ಗುಟ್ಟನ್ನೂ ರಟ್ಟು ಮಾಡಲಿದ್ದಾರೆ.
ಹಾಗೇ ನೋಡಿದರೆ ಭೈರತಿ ರಣಗಲ್, ಶಿವಣ್ಣ ಅಭಿನಯದ 125ನೇ ಚಿತ್ರವಾಗಬೇಕಿತ್ತು. ಆದರೆ, ಅದು ಆಗಲಿಲ್ಲ. ಕೊನೆಗೂ ಚಿತ್ರ ಆರಂಭವಾಗುತ್ತಿದ್ದು, ಈ ಚಿತ್ರದ ಬಗ್ಗೆ ಮಾತನಾಡಿರೋ ಶಿವರಾಜ್ ಕುಮಾರ್ ಎಲ್ಲದಕ್ಕೂ ಕಾರಣ ನರ್ತನ್. ಹೀಗಾಗಿಯೇ ನರ್ತನ್ ಅಂದರೆ ಸೈಲೆಂಟ್ ಅಲ್ಲ. ವೈಲೆಂಟ್ ಎಂದ ಶಿವಣ್ಣ, ಬೈರತಿ ರಣಗಲ್ ಚಿತ್ರವನ್ನು ನಮ್ಮದೇ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣ ಮಾಡಬೇಕು ಎಂಬ ಆಲೋಚನೆ ಇಂದು ನಿನ್ನೆಯದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಂದಹಾಗೇ ಮಫ್ತಿ ಸಿನಿಮಾದಲ್ಲಿ ನಟಿ ಶಾನ್ವಿ ಶ್ರೀವಾತ್ಸವ್ ನಾಯಕಿ ಪಾತ್ರವನ್ನು ನಿರ್ವಹಿಸಿದ್ದರು. ಛಾಯಾ ಸಿಂಗ್ ಶಿವಣ್ಣನ ತಂಗಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ರಾಜಕಾರಣಿಯಾಗಿ ದೇವರಾಜ್ ಹಾಗೂ ಪರಿಸರ ಪ್ರೇಮಿಯಾಗಿ ಪ್ರಕಾಶ್ ಬೆಳವಾಡಿ ಚಿತ್ರದಲ್ಲಿದ್ದರು. ನಕ್ಕು ನಗಿಸುವ ಜವಾಬ್ಧಾರಿಯನ್ನು ಚಿಕ್ಕಣ್ಣ ಹಾಗೂ ಸಾಧುಕೋಕಿಲಾ ವಹಿಸಿಕೊಂಡಿದ್ದರು. ಬೈರತಿ ರಣಗಲ್ನಲ್ಲಿ ಇವರೆಲ್ಲರೂ ಇರಲಿದ್ದಾರಾ..? ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಹೇಳುವುದು ಕಷ್ಟವಾದರೂ ಆ ಚಿತ್ರದಲ್ಲಿದ್ದ ಕೆಲ ಪಾತ್ರಗಳು ಇಲ್ಲಿಯೂ ಮುಂದುವರೆಯಲಿವೆ. ಒಂದು ವಿಶೇಷವಾದ ಅಂಶ ಕೂಡ ಚಿತ್ರದಲ್ಲಿದೆ ಎಂದು ಶಿವಣ್ಣ ಹೇಳಿದ್ದಾರೆ.
ಇನ್ನು ಸದ್ಯಕ್ಕೆ ಪ್ಯಾನ್ ಇಂಡಿಯಾ ಟ್ರೆಂಡ್ ನಡೆಯುತ್ತಿದೆ. ಆದರೆ ಮಫ್ತಿ ಟ್ರೆಂಡ್ನ ಫಾಲೋ ಮಾಡಿರಲಿಲ್ಲ. ಆದರೂ ಚಿತ್ರ ಬಿಡುಗಡೆಯ ನಂತರ ಬೇಡಿಕೆ ಹೆಚ್ಚಾಗಿತ್ತು. ಬೇರೆ ಬೇರೆ ಭಾಷೆಗೆ ಚಿತ್ರ ಡಬ್ ಕೂಡ ಆಗಿತ್ತು. ಭೈರತಿ ರಣಗಲ್ ವಿಚಾರದಲ್ಲಿಯೂ ಸದ್ಯಕ್ಕೆ ಶಿವಣ್ಣ ಅವರದ್ದು ಇದೇ ಆಲೋಚನೆ. ಪ್ಯಾನ್ ಇಂಡಿಯಾ ಆಗಬೇಕೆಂದರೆ ಅದು ಅದಾಗಿಯೇ ಆಗುತ್ತೆ ಎನ್ನುವ ಶಿವಣ್ಣ, ಭೈರತಿ ರಣಗಲ್ ಚಿತ್ರವನ್ನು ಬಿಡುಗಡೆ ಮಾಡುವ ಮುನ್ನ ಮಫ್ತಿ ಚಿತ್ರವನ್ನು ಮರು ಬಿಡುಗಡೆ ಮಾಡುವ ನಿರ್ಧಾರವನ್ನೂ ತೆಗೆದುಕೊಂಡಿದ್ದಾರೆ.
ಮಿಕ್ಕಂತೆ ಚಿತ್ರದ ಮುಹೂರ್ತ ಸಮಾರಂಭಕ್ಕೆ ಕೆ.ಆರ್.ಜಿ ಸಂಸ್ಥೆಯ ನಿರ್ಮಾಪಕ ಕಾರ್ತಿಕ್ ಗೌಡ ಆಗಮಿಸಿದ್ದರು. ಶಿವಣ್ಣ ಆಪ್ತ ಕೆ.ಪಿ.ಶ್ರೀಕಾಂತ್, ಚಿ.ಗುರುದತ್ ಕೂಡ ಬೈರತಿ ರಣಗಲ್ ಗೆ ಶುಭಾಶಯ ಕೋರಲು ಬಂದಿದ್ದರು. ಶಿವಣ್ಣ ಪುತ್ರಿ ನಿವೇದಿತಾ ಕೂಡ ತಂದೆಯ ಈ ಮಹತ್ವಕಾಂಕ್ಷೆಯ ಸಿನಿಮಾದ ಭಾಗವಾಗಿದ್ದರು.
ಸದ್ಯಕ್ಕೆ ಬೈರತಿ ರಣಗಲ್ ಚಿತ್ರದ ಮುಹೂರ್ತ ನೆರವೇರಿದೆ. ಮಫ್ತಿ ಚಿತ್ರಕ್ಕೆ ಕೆಲಸ ಮಾಡಿದ್ದ ತಂತ್ರಜ್ಞರ ತಂಡ ಬೈರತಿ ರಣಗಲ್ ಚಿತ್ರಕ್ಕೂ ಕೆಲಸ ಮಾಡಲಿದೆ. ಬಳ್ಳಾರಿ ಹಾಗೂ ಮೈಸೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಜೂನ್ 10 ರಿಂದ ಬೈರತಿ ರಣಗಲ್ ಚಿತ್ರೀಕರಣ ಆರಂಭವಾಗಲಿದೆ. ಒಟ್ಟಿನಲ್ಲಿ ಭೈರತಿ ರಣಗಲ್ ಸಿನಿಮಾ ತುಂಬಾನೇ ವಿಶೇಷವಾದ ಸಿನಿಮಾ ಎಂದು ಶಿವಣ್ಣ ಹೇಳಿದ್ದಾರೆ. ಚಿತ್ರದ ವಿಶೇಷತೆಯನ್ನೂ ಹಂಚಿಕೊಂಡಿದ್ದು, ಇನ್ನೇನು ಕಪ್ಪು ಶರ್ಟ್ ಹಾಗೂ ಕಪ್ಪು ಪಂಚೆಯನ್ನುಟ್ಟು ಶಿವಣ್ಣ ಭೈರತಿ ರಣಗಲ್ ಪ್ರಪಂಚಕ್ಕೆ ಕಾಲಿಡಬೇಕಷ್ಟೇ.
ಇದನ್ನೂ ಓದಿ : ಕಾರ್ತಿ ನಟನೆಯ ಜಪಾನ್ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ: ಶುಭ ಹಾರೈಸಿದ ಕಾಂತಾರ ನಟ