ಮುಂಬೈ (ಮಹಾರಾಷ್ಟ್ರ): 2007ರಲ್ಲಿ ರಾಜಸ್ಥಾನದಲ್ಲಿ ನಡೆದ ಚಾರಿಟಿ ಕಾರ್ಯಕ್ರಮವೊಂದರ ವೇದಿಕೆ ಮೇಲೆ ಹಾಲಿವುಡ್ ನಟ ರಿಚರ್ಡ್ ಗೇರ್ ಅವರೊಂದಿಗಿನ ಮುತ್ತಿನ ಪ್ರಕರಣವು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಬಿಡುವಂತೆ ಕಾಣುತ್ತಿಲ್ಲ.
15 ವರ್ಷಗಳ ಹಿಂದಿನ ಪ್ರಕರಣದಿಂದ ಶಿಲ್ಪಾ ಶೆಟ್ಟಿ ಅವರನ್ನು ಖುಲಾಸೆಗೊಳಿಸಿ ಕಳೆದ ಜನವರಿಯಲ್ಲಿ ಮುಂಬೈನ ಬಲ್ಲಾರ್ಡ್ ಪಿಯರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಹೊರಡಿಸಿ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಇದೀಗ ಈ ಅರ್ಜಿಯನ್ನು ವಜಾಗೊಳಿಸುವಂತೆ ಶೆಟ್ಟಿ ತನ್ನ ವಕೀಲ ಪ್ರಶಾಂತ್ ಪಾಟೀಲ್ ಮೂಲಕ ಮನವಿ ಮಾಡಿದ್ದಾರೆ.
ಶಿಲ್ಪಾ ಶೆಟ್ಟಿ ಅವರನ್ನು ಆರೋಪದಿಂದ ಮುಕ್ತಗೊಳಿಸಿದ್ದ ಮ್ಯಾಜಿಸ್ಟ್ರೇಟ್ ಆದೇಶದ ವಿರುದ್ಧ ರಾಜಸ್ಥಾನದ ಅಲ್ವಾರ್ ಪೊಲೀಸರು ಏಪ್ರಿಲ್‌ನಲ್ಲಿ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಚುಂಬಿಸುವ ಅಥವಾ ಚುಂಬಿಸಲು ಅನುಮತಿಸುವ ಶಿಲ್ಪಾ ಶೆಟ್ಟಿ ಅವರ ಕೃತ್ಯವು ಅಶ್ಲೀಲವಾಗಿದೆ ಎಂದು ಪೊಲೀಸರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ಈ ಅರ್ಜಿಯನ್ನು ವಜಾ ಮಾಡುವಂತೆ ಕೋರಿರುವ ಶಿಲ್ಪಾ ಶೆಟ್ಟಿ, ನಾನು ಕಲಾವಿದೆಯಾಗಿ ಯಾವಾಗಲೂ ಸಾರ್ವಜನಿಕವಾಗಿ ಜವಾಬ್ದಾರಿಯುತವಾಗಿ ವರ್ತಿಸಿದ್ದೇನೆ. ಆದರೆ, ಅಗ್ಗದ ಪ್ರಚಾರಕ್ಕಾಗಿ ನನ್ನ ವಿರುದ್ಧ ಈಗ ಮತ್ತೆ ನ್ಯಾಯಾಲಯದ ಮೊರೆ ಹೋಗಲಾಗಿದೆ ಎಂದು ಹೇಳಿದ್ದಾರೆ.
ಇನ್ನು, 2007ರಲ್ಲಿ ನಡೆದ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ನಟ ರಿಚರ್ಡ್ ಗೇರ್ ಹಾಗೂ ಶಿಲ್ಪಾ ಶೆಟ್ಟಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ವೇದಿಕೆ ಮೇಲೆಯೇ ಶಿಲ್ಪಾ ಶೆಟ್ಟಿ ಅವರಿಗೆ ರಿಚರ್ಡ್ ಮುತ್ತು ಕೊಟ್ಟಿದ್ದರು. ಆದರೆ, ತಮ್ಮನ್ನು ಚುಂಬಿಸಿದಾಗ ಶಿಲ್ಪಾ ಶೆಟ್ಟಿ ಪ್ರತಿಭಟಿಸಲಿಲ್ಲ. ಹೀಗಾಗಿ ಇಬ್ಬರೂ ಅಶ್ಲೀಲತೆ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿ ಅಲ್ವಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಎರಡನೇ ಮಗು ಪಡೆಯಲು ಮುಂದಾದರಾ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್?