ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಹಿಂದಿ ಬಿಗ್ ಬಾಸ್ ಮೂಲಕ ಸಾಕಷ್ಟು ಜನಪ್ರಿಯತೆ, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಶೆಹನಾಜ್ ಗಿಲ್ ಈ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಸಲ್ಮಾನ್, ಪೂಜಾ ಹೆಗ್ಡೆ ಮುಖ್ಯಭೂಮಿಕೆಯ ಈ ಚಿತ್ರದಲ್ಲಿ ಶೆಹನಾಜ್ ಗಿಲ್ ಪ್ರಮುಖ ಪಾತ್ರ ನಿರ್ವಹಿಸಿದ್ದು, ಅವರ ಚೊಚ್ಚಲ ಹಿಂದಿ ಚಿತ್ರವಿದು.
ಸಲ್ಮಾನ್ ಖಾನ್ ನಿರೂಪಣೆಯ ರಿಯಾಲಿಟಿ ಶೋ ಹಿಂದಿ ಬಿಗ್ ಬಾಸ್ ಸೀಸನ್ 13ರಲ್ಲಿ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ಅದಕ್ಕೂ ಮುನ್ನ ಪಂಜಾಬಿ ಮನರಂಜನಾ ಕ್ಷೇತ್ರದಲ್ಲಿ ಸ್ಟಾರ್ ಆಗಿದ್ದರು. ಕಾಲಾ ಶಾ ಕಾಲಾ ಮತ್ತು ಹೊನ್ಸ್ಲಾ ರಾಖ್‌ನಂತಹ ಪಂಜಾಬಿ ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದ ನಟಿ ಬಿಗ್ ಬಾಸ್‌ನಲ್ಲಿ ಭಾಗಿಯಾಗಿ ಸಖತ್ ಪಾಪುಲರ್ ಆದರು. ಆದ್ರೆ ಆ ಸಂದರ್ಭ ಬಾಡಿ ಶೇಮಿಂಗ್ ಎದುರಿಸಿದ್ದು, ಅದು ತಮ್ಮ ಪರ್ಫೆಕ್ಟ್ ಪರ್ಸನಾಲಿಟಿಗಾಗಿ ಕೆಲಸ ಮಾಡಲು ಪ್ರೇರೇಪಿಸಿತು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
"ನಾನು ನನ್ನನ್ನು ಬದಲಾಯಿಸಿದೆ. ನನಗಾಗಿ ಕೆಲಸ ಮಾಡಿದೆ. ಜನರು ನನಗೆ ಒಳ್ಳೆಯ ಸಲಹೆಗಳನ್ನು ನೀಡಿದಾಗ, ನಾನು ಅದನ್ನು ಸ್ವೀಕರಿಸಿ ಸುಧಾರಿಸಿಕೊಂಡೆ. ನಾನು ಅಧಿಕ ತೂಕ ಇದ್ದ ಬಗ್ಗೆ ಬಿಗ್ ಬಾಸ್‌ನಲ್ಲಿ ಸಾಕಷ್ಟು ಕಾಮೆಂಟ್‌ಗಳನ್ನು ಕೇಳಿದೆ, ಈ ಹಿನ್ನೆಲೆ ನಾನು ತೂಕ ಕಡಿಮೆ ಮಾಡಿಕೊಂಡೆ. ನಂತರ ನಾನು ನನ್ನ ಫ್ಯಾಷನ್ ಶೈಲಿಯನ್ನು ಬದಲಾಯಿಸಿಕೊಂಡೆ. ನಾನು ಸಲ್ವಾರ್ ಸೂಟ್ ಅನ್ನು ಮಾತ್ರ ಧರಿಸಬಹುದೆಂದು ಜನರು ಭಾವಿಸಿದ್ದರು. ನಾನು ಈ ಎಲ್ಲಾ ಪೂರ್ವಾಗ್ರಹದ ಕಲ್ಪನೆಗಳನ್ನು ಮುರಿದು ಮುಂದೆ ಹೋಗುತ್ತಿದ್ದೇನೆ" ಎಂದು ಶೆಹನಾಜ್ ಗಿಲ್ ಹೇಳಿದರು.
ಇದನ್ನೂ ಓದಿ: ಲಕ್ಕಿ ಫ್ಯಾನ್: ಮನ್ನತ್ಗೆ ಆಹ್ವಾನ, ಪಿಜ್ಜಾ ಮಾಡಿಕೊಟ್ಟ ಶಾರುಖ್ ಖಾನ್
ಬಿಗ್ ಬಾಸ್ ದಿನಗಳಿಂದಲೂ ಸಲ್ಮಾನ್ ಖಾನ್ ಅವರು ನಿರಂತರವಾಗಿ ಬೆಂಬಲವಾಗಿದ್ದಾರೆ. ನೀವು ಮುಂದೆ ಸಾಗಬಹುದು, ನಿಮಗೆ ಸಾಮರ್ಥ್ಯ ಇದೆ, ನಿಮಗಾಗಿ ಕೆಲಸ ಮಾಡಿ ಎಂದು ಸಲ್ಮಾನ್ ಸರ್ ನನ್ನನ್ನು ಪ್ರೇರೇಪಿಸುತ್ತಿದ್ದರು. ಅವರು ಸದಾ ನನ್ನನ್ನು ಬೆಂಬಲಿಸುತ್ತಾ ಬಂದಿದ್ದಾರೆ. ನನಗೆ ಅವರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಬಾಲಿವುಡ್ ಸೂಪರ್ ಸ್ಟಾರ್ ತನಗೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದಲ್ಲಿ ಅವಕಾಶ ನೀಡಿದರು ಎಂದು ಗಿಲ್ ಹೇಳಿದರು.
ಇದನ್ನೂ ಓದಿ: 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಕಲೆಕ್ಷನ್ ಎಷ್ಟು ಗೊತ್ತಾ?
ಸಲ್ಮಾನ್ ಖಾನ್ ಫಿಲ್ಮ್ (SKF) ನಿರ್ಮಾಣದ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದಲ್ಲಿ ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಭೂಮಿಕಾ ಚಾವ್ಲಾ, ವಿಜೇಂದರ್ ಸಿಂಗ್, ಅಭಿಮನ್ಯು ಸಿಂಗ್, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್, ಪಲಕ್ ತಿವಾರಿ, ವಿನಾಲಿ ಭಟ್ನಾಗರ್ ಮತ್ತು ರೋಹಿಣಿ ಹತ್ತಂಗಡಿ ಕೂಡ ನಟಿಸಿದ್ದಾರೆ. ಫರ್ಹಾದ್ ಸಾಮ್ಜಿ ನಿರ್ದೇಶನದ ಈ ಚಿತ್ರ ಶುಕ್ರವಾರ ತೆರೆ ಕಂಡಿದ್ದು ಎರಡು ದಿನದಲ್ಲಿ 41 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.