ಬೆಂಗಳೂರು: ಬಾಲಿವುಡ್ ನಟಿ ಶೆಹನಾಜ್ ಗಿಲ್ ಆರೋಗ್ಯದಲ್ಲಿ ಏರು ಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಬೈನ ಆಸ್ಪತ್ರೆಯಲ್ಲಿ ದಾಖಲಾಗಿರುವ ನಟಿಗೆ ಆಹಾರದ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ. ಕಿರುತೆರೆ ಅಭಿಮಾನಿಗಳಲ್ಲಿ ಜನಪ್ರಿಯತೆ ಪಡೆದ ಈ ನಟಿ ನಟ ಸಲ್ಮಾನ್ ಖಾನ್ ನಟನೆಯ ಕಿಸಿ ಕಾ ಬಾಯ್ ಕಿಸಿ ಕಿ ಒಜಾನ್ ಚಿತ್ರದ ಮೂಲಕ ಬಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆ ನಡೆಸಿದ್ದರು. ಇದೀಗ ಅವರು ರಿಯಾ ಕಪೂರ್ ನಿರ್ಮಾಣದ, ಕರಣ್ ಬೊಲಾನಿ ನಿರ್ದೇಶನದ ಥ್ಯಾಂಕ್ಯೂ ಫಾರ್ ಕಮಿಂಗ್ ಚಿತ್ರದಲ್ಲಿ ನಟಿಸಿದ್ದು, ಅಕ್ಟೋಬರ್ 6ರಂದು ಚಿತ್ರ ತೆರೆ ಕಂಡಿದೆ.
ಈ ಚಿತ್ರದಲ್ಲಿ ನಟಿ ಶೆಹಾನಾಜ್ ಹೊರತಾಗಿ ನಟಿ ಭೂಮಿ ಪಡ್ನೇಕರ್, ಡೋಲಿ ಸಿಂಗ್, ಕುಶಾ ಕಪಿಲ್ ಮತ್ತು ಶೈಬಾನಿ ಬೇಡಿ ಕೂಡ ನಟಿಸಿದ್ದಾರೆ. ನಟಿ ಶೆಹನಾಜ್ ಅನಾರೋಗ್ಯದ ಹಿನ್ನಲೆ ಅವರ ಹೊರತಾಗಿ ಇನ್ನುಳಿದ ಕಲಾವಿದರು ಚಿತ್ರದ ಪ್ರೋಮೊಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಮೂಲಗಳ ಪ್ರಕಾರ ನಟಿಯು ಸೋಂಕಿನ ತೀವ್ರತೆಗೆ ಒಳಗಾದ ಹಿನ್ನಲೆ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿ ತಿಳಿಸಿದೆ.
ಚಿತ್ರ ನಿರ್ಮಾಪಕಿ ರಿಯಾ ಕಪೂರ್ ಶೆಹಾನಾಜ್ ಅವರ ಆಸ್ಪತ್ರೆ ಭೇಟಿ ವೇಳೆ ಕಂಡು ಬಂದಿರುವ ವಿಡಿಯೋವನ್ನು ಪ್ಯಾಪಾರಾಜಿಗಳು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ, ಶೆಹಾನಾಜ್ ಚಿಕಿತ್ಸೆ ಬಳಿಕ ರಿಯಾ ತಮ್ಮ ಐಷಾರಾಮಿ ಕಾರ್ನಲ್ಲಿ ಹೊರ ಹೋಗುತ್ತಿರುವುದು ಕಾಣಬಹುದಾಗಿದೆ.
30 ವರ್ಷದ ನಟಿ ಶೆಹನಾಜ್ ಆಸ್ಪತ್ರೆಗೆ ದಾಖಲಾಗುತ್ತಿದ್ದ ಸುದ್ದಿ ತಿಳಿಯುತ್ತಿದ್ದಂತೆ, ಆಕೆಯ ಅಭಿಮಾನಿಗಳು ಆಕೆಯ ಶೀಘ್ರದಲ್ಲಿ ಗುಣಮುಖವಾಗುವಂತೆ ಹಾರೈಸಿದ್ದಾರೆ. ಅನೇಕ ಅಭಿಮಾನಿಗಳು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿರುವ ಅಭಿಮಾನಿಯೊಬ್ಬರು, ಶೀಘ್ರದಲ್ಲೇ ಗುಣಮುಖವಾಗು ಮಗುವೇ ಎಂದಿದ್ದರೆ, ಮತ್ತೊಬ್ಬರು, ನಿಮ್ಮ ಬಗ್ಗೆ ಕಾಳಜಿ ವಹಿಸಿ ಎಂದಿದ್ದಾರೆ. ಮತ್ತೊಬ್ಬ ಅಭಿಮಾನಿ ನಿಮ್ಮ ಆಗಮನ ಕಂಡು ಆಸ್ಪತ್ರೆ ನೀವು ಬಂದಿದ್ದಕ್ಕೆ ಧನ್ಯವಾದ ಎಂದಿರಬೇಕು ಎಂದು ಆಕೆಯನ್ನು ಹಾಡಿ ಹೊಗಳಿದ್ದಾರೆ.
ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟಿ ಮುಂದಿನ ಚಿತ್ರದಲ್ಲಿ ನಟ ರಿತೇಶ್ ದೇಶ್ಮುಖ್, ನೂರ್ ಪತೇಹ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಮತ್ತೆ ಜಾನ್ ಅಬ್ರಹಾಂ ಜೊತೆ ಕಾಣಿಸಿಕೊಂಡಿದ್ದು, ಈ ಚಿತ್ರ ಈ ವರ್ಷ ದೀಪಾವಳಿಗೆ ಬಿಡುಗಡೆಯಾಗಲು ಸಜ್ಜಾಗಿದೆ.