ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ಅಂದಾಕ್ಷಣ ಸಹಜವಾಗಿ ನೆನಪಾಗುವುದು ಸದಾಶಿವನಗರದಲ್ಲಿರುವ ಡಾ.ರಾಜ್ಕುಮಾರ್ ಅವರ ಐಷಾರಾಮಿ ಮನೆ. ಅಣ್ಣಾವ್ರಂತೆ ಅವರ ಮೂರು ಮಕ್ಕಳಾದ ಶಿವ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ದಿವಂಗತ ಪುನೀತ್ ರಾಜ್ಕುಮಾರ್ ಸ್ಟಾರ್ ನಟರಾಗಿ ಮಿಂಚಿದ್ದಾರೆ.
ಇವರು ಮಾತ್ರವಲ್ಲದೇ ಅಣ್ಣಾವ್ರ ಮೊಮ್ಮಕ್ಕಳಾದ ವಿನಯ್ ರಾಜ್ಕುಮಾರ್, ಯುವ ರಾಜ್ಕುಮಾರ್, ಧೀರೇನ್ ರಾಮ್ ಕುಮಾರ್, ಧನ್ಯ ರಾಮ್ ಕುಮಾರ್ ಹಾಗು ಶಿವಣ್ಣನ ಮಗಳು ನಿವೇದಿತಾ ಶಿವ ರಾಜ್ಕುಮಾರ್ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಅಣ್ಣಾವ್ರ ಕುಟುಂಬದಿಂದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಅಷ್ಟಕ್ಕೂ ಯಾರು ಅಂತೀರಾ? ಆಕಸ್ಮಿಕ, ಜೀವನ ಚೈತ್ರ, ರಥಸಪ್ತಮಿ, ಭಕ್ತ ಪ್ರಹ್ಲಾದ, ಭಾಗ್ಯವಂತ, ವಸಂತ ಗೀತಾ, ಹೀಗೆ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಎಸ್.ಗೋವಿಂದರಾಜ್ ಹಾಗೂ ಅಣ್ಣಾವ್ರ ಮಗಳು ಲಕ್ಷ್ಮೀ ಅವರ ಮಗ ಷಣ್ಮುಖ ಗೋವಿಂದರಾಜ್ ಈಗ ಬೆಳ್ಳಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.
'ಚಿನ್ನದ ಮಲ್ಲಿಗೆ ಹೂವೇ': ಈ ಸಿನಿಮಾಗೆ 'ಚಿನ್ನದ ಮಲ್ಲಿಗೆ ಹೂವೇ' ಅಂತ ಟೈಟಲ್ ಇಡಲಾಗಿದೆ. ಈ ಹಿಂದೆ ನವಿಲು ಗರಿ ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ನವೀನ್ ಪಿ.ಎ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರ ವಜ್ರಗಳು ಕಾದಂಬರಿ ಆಧಾರಿತ ಸಾರಾ ವಜ್ರ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕಿ ಆರ್‍ನಾ ಸಾಧ್ಯ ಇದೀಗ ಈ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕಿಯಾಗಿ ಗುರುತಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: Ghoomer: ಅಭಿಷೇಕ್ ಬಚ್ಚನ್ ನಟನೆಯ 'ಘೂಮರ್' ರಿಲೀಸ್; ಸಿನಿ ಪ್ರೇಮಿಗಳ ಮೆಚ್ಚುಗೆ
ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆಯನ್ನು ತಮ್ಮ ಮುದ್ದಾದ ಅಕ್ಷರದ ಮೂಲಕ ಖ್ಯಾತ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಬರೆದುಕೊಟ್ಟರು. ನಟ ಡಾ.ರಾಘವೇಂದ್ರ ರಾಜಕುಮಾರ್ ಶೀರ್ಷಿಕೆ ಅನಾವರಣ ಮಾಡಿದರು. ಬಳಿಕ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್ ಈ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಚಿತ್ರತಂಡ ಹೀಗಿದೆ..: ಷಣ್ಮುಖ ಗೋವಿಂದರಾಜ್ ಇದೇ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿದ್ದು, ನಾಗೇಂದ್ರ ಪ್ರಸಾದ್ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಉಳಿದ ಪಾತ್ರಗಳ ಆಡಿಷನ್ ನಡೆಯುತ್ತಿದೆ. ಪ್ರಣವ್ ಸತೀಶ್ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದು, ಮಧು ತುಂಬಕೆರೆ ಅವರ ಸಂಕಲನವಿರಲಿದೆ. ಸಂಭ್ರಮ ಮೀಡಿಯಾ ಹೌಸ್ ಎಂಬ ಸಂಸ್ಥೆಯ ಮೂಲಕ ಚಿನ್ನದ ಮಲ್ಲಿಗೆ ಹೂವೇ ಚಿತ್ರ ನಿರ್ಮಾಣ ಆಗಲಿದೆ.
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನವಿಲುಗರಿ ನವೀನ್ ರಚನೆ ಹಾಗೂ ನಿರ್ದೇಶನ ಮಾಡುತ್ತಿದ್ದು, ಮುಂದಿನ ತಿಂಗಳಿಂದ ಚಿನ್ನದ ಮಲ್ಲಿಗೆ ಹೂವೇ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಇದೇ ಮೊದಲ ಬಾರಿಗೆ ನಾಯಕ ನಟನಾಗಿ ಷಣ್ಮುಖ ಗೋವಿಂದರಾಜ್ ಅಭಿನಯಿಸುತ್ತಿದ್ದು, ಸಹಜವಾಗಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.
ಇದನ್ನೂ ಓದಿ: Vamana: ಧನ್ವೀರ್ ನಟನೆಯ 'ವಾಮನ' ಚಿತ್ರದ ಆಕ್ಷನ್ ಟೀಸರ್ ರಿಲೀಸ್