ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರ ಪುತ್ರ ಝೈದ್ ಖಾನ್ ನಾಯಕನಾಗಿ ನಟಿಸಿರುವ ಪ್ಯಾನ್ ಇಂಡಿಯಾ ಚಿತ್ರ ಬನಾರಸ್. ಬಿಡುಗಡೆಗೆ ಸಜ್ಜಾಗಿರುವ ಬನಾರಸ್ ಸಿನಿಮಾ ಪ್ರಚಾರ ಜೋರಾಗಿದೆ. ಸಾಮಾನ್ಯವಾಗಿ ಪ್ಯಾನ್ ಮಟ್ಟದ ಸಿನಿಮಾಗಳ ಯಶಸ್ಸಿಗೆ ವಿತರಣೆಯ ಜವಾಬ್ದಾರಿ ಪಡೆಯುವ ಸಂಸ್ಥೆಗಳ ಪಾತ್ರವೂ ಬಹು ಮುಖ್ಯವಾಗುತ್ತದೆ. ಈ ವಿಚಾರದಲ್ಲಿ ಬನಾರಸ್‌ನದ್ದು ಯಶಸ್ವಿ ಯಾನ.
ಏಕೆಂದರೆ, ನಾನಾ ಭಾಷೆಗಳಲ್ಲಿ ಈಗಾಗಲೇ ಸೂಪರ್ ಹಿಟ್ ಸಿನಿಮಾಗಳನ್ನು ವಿತರಿಸಿ ಸೈ ಎನ್ನಿಸಿಕೊಂಡಿರುವ ಸಂಸ್ಥೆಗಳೇ ಬನಾರಸ್ ಸಿನಿಮಾದ ಸಾರಥ್ಯ ವಹಿಸಿಕೊಂಡಿವೆ. ಇದೀಗ ತಮಿಳುನಾಡಿನಲ್ಲಿ ಬನಾರಸ್ ಅನ್ನು ತೆರೆಗಾಣಿಸುವ ಜವಾಬ್ದಾರಿಯನ್ನು ಪ್ರತಿಷ್ಠಿತ ವಿತರಣಾ ಸಂಸ್ಥೆಯಾಗಿರುವ ಶಕ್ತಿ ಫಿಲಂ ಫ್ಯಾಕ್ಟರಿ ವಹಿಸಿಕೊಂಡಿದೆ.
ಈಗಾಗಲೇ ಕರ್ನಾಟಕ, ಕೇರಳ ಮತ್ತು ಉತ್ತರ ಭಾರತದ ಬನಾರಸ್ ವಿತರಣಾ ಹಕ್ಕುಗಳು ಖ್ಯಾತ ಸಂಸ್ಥೆಗಳ ಪಾಲಾಗಿವೆ. ಇದೀಗ ಶಕ್ತಿ ಫಿಲಂ ಫ್ಯಾಕ್ಟರಿ 4 ರಿಂದ 5 ಕೋಟಿ ರೂಪಾಯಿಗೆ ಬನಾರಸ್ ವಿತರಣಾ ಹಕ್ಕುಗಳನ್ನು ಖರೀದಿಸಿದೆ. ತಮಿಳುನಾಡಿನಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಸಿನಿಮಾಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಶಕ್ತಿ ಫಿಲಂ ಫ್ಯಾಕ್ಟರಿ ಹೆಸರುವಾಸಿಯಾಗಿದೆ. ಈ ಸಂಸ್ಥೆಯ ಕಡೆಯಿಂದ ತೆರೆಕಂಡ ಅದೆಷ್ಟೋ ಚಿತ್ರಗಳು ಸೂಪರ್ ಹಿಟ್ ಆಗಿವೆ. ಈ ಕಾರಣದಿಂದಲೇ ಬನಾರಸ್ ಬಗೆಗಿನ ನಿರೀಕ್ಷೆ ತಮಿಳುನಾಡಿನಾದ್ಯಂತ ದುಪ್ಪಟ್ಟಾಗಿದೆ.
ಇದನ್ನೂ ಓದಿ: ಕಾಂತಾರ ಹವಾ: ರಿಷಬ್ ಶೆಟ್ರನ್ನು ಅಪ್ಪಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ ನಟ ಕಾರ್ತಿ
ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ ಬನಾರಸ್ ಈಗಾಗಲೇ ಹಾಡುಗಳು ಮತ್ತು ಟ್ರೈಲರ್ ಮೂಲಕ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಂಡಿವೆ. ಇವೆಲ್ಲವುಗಳ ಮೂಲಕವೇ ಬಹುನಿರೀಕ್ಷಿತ ಚಿತ್ರವೆಂಬ ಹೆಗ್ಗಳಿಕೆಯನ್ನೂ ತನ್ನದಾಗಿಸಿಕೊಂಡಿದೆ. ಜಯತೀರ್ಥ ಮಧುರವಾದ ಪ್ರೇಮಕಥಾನಕಗಳಿಗೆ, ಅಚ್ಚರಿದಾಯಕ ನಿರೂಪಣಾ ಶೈಲಿಗೆ ಹೆಸರಾಗಿರುವ ನಿರ್ದೇಶಕ. ಬನಾರಸ್ ಮೂಲಕ ಅವರು ಮತ್ತೊಂದು ಆಯಾಮದ ಕಥೆ ಹೇಳಹೊರಟಿದ್ದಾರೆ. ಟ್ರಾವೆಲಿಂಗ್ ಸ್ಟೋರಿ ಕಥೆ ಆಧರಿಸಿರೋ ಬನಾರಸ್ ಸಿನಿಮಾ ಮುಂದಿನ ತಿಂಗಳು(ನವೆಂಬರ್) 4 ರಂದು ದೇಶಾದ್ಯಂತ ತೆರೆ ಕಾಣಲಿದೆ.