ಕನ್ನಡ ಚಿತ್ರರಂಗದ ದೊಡ್ಮನೆ ಮಗ ಅಭಿಮಾನಿಗಳ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಒಂದು ವರ್ಷ ತುಂಬಿದೆ. ಆದರೆ ಪರಮಾತ್ಮನ ಆರಾಧನೆ ಮುಂದುವರಿದಿದೆ. ಅದರಂತೆ ವೂಟ್ ಸೆಲೆಕ್ಟ್ ವೇದಿಕೆಯಿಂದ ಪುನೀತ್ ಸೂಪರ್ ಹಿಟ್ ಸಿನಿಮಾಗಳ ಮೂಲಕವೇ ಅಪ್ಪು ಸಿನಿನಮನ ಸಲ್ಲಿಸಲಾಗುತ್ತಿದೆ.
ಹೌದು, ಪುನೀತ್ ರಾಜ್‌ಕುಮಾರ್ ಅಭಿನಯದ ಆರು ಸೂಪರ್ ಹಿಟ್ ಸಿನಿಮಾಗಳು ಅಕ್ಟೋಬರ್ 28ರಿಂದ ವೂಟ್ ಸೆಲೆಕ್ಟ್‌ನಲ್ಲಿ ಪ್ರಸಾರ ಆಗುತ್ತಿದೆ. ಅಪ್ಪು, ಅಭಿ, ಆಕಾಶ್, ನಮ್ಮ ಬಸವ, ಮೌರ್ಯ, ಅಜಯ್ ಚಿತ್ರಗಳು ವೂಟ್ ಸೆಲೆಕ್ಟ್‌ನಲ್ಲಿ ವೀಕ್ಷಣೆಗೆ ಲಭ್ಯ ಇವೆ.
ಪವರ್ ಸ್ಟಾರ್ ಜೊತೆಗೆ ನಟಿಸಿದ್ದ ಸಹ ಕಲಾವಿದರು ಪುನೀತ್ ಜೊತೆಗಿದ್ದ ತಮ್ಮ ಒಡನಾಟವನ್ನು ಸ್ಮರಿಸಿದ್ದಾರೆ. ಮೊದಲಿಗೆ ಅಪ್ಪು ಸಿನಿಮಾದಲ್ಲೇ ಖಳ ನಾಯಕನ ಪಾತ್ರ ಮಾಡಿ ಗಮನ ಸೆಳೆದಿದ್ದ ಚಂದನವನದ ಹಿರಿಯ ನಟ ಅವಿನಾಶ್ ಕೂಡ ಅಪ್ಪು ಸಿನಿಮಾವನ್ನು ಮೆಚ್ಚಿಕೊಂಡಿದ್ದು, ಅಪ್ಪು ಕುರಿತು ಅಕ್ಕರೆಯಿಂದ ಮಾತಾಡಿದ್ದಾರೆ. ಅಪ್ಪು,ನಮ್ಮ ಬಸವ ಮತ್ತು ಆಕಾಶ್ ಈ ಮೂರು ಸಿನಿಮಾಗಳಲ್ಲಿ ಅವಿನಾಶ್ ಅವರು ಪುನೀತ್ ಜೊತೆಗೆ ತೆರೆ ಹಂಚಿಕೊಂಡಿದ್ದರು.
ಇಂಟಲಿಜೆಂಟ್ ಸ್ಟಾರ್: ಅಪ್ಪು ಒಬ್ಬ ಇಂಟಲಿಜೆಂಟ್ ಸ್ಟಾರ್ ಎನ್ನುವುದು ಅವಿನಾಶ್ ಅಭಿಪ್ರಾಯ. ಅವರಿಗೆ ಹಾಗನಿಸಿದ್ದು 'ಆಕಾಶ್' ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ. ಆ ದಿನಗಳನ್ನು ಅವರು ನೆನಪಿಸಿಕೊಂಡಿದ್ದು ಹೀಗೆ - 'ಬೆಂಗಳೂರಿನ ಜೆ.ಪಿ. ನಗರದ ಒಂದು ಮನೆಯಲ್ಲಿಯೇ ಆಕಾಶ್ ಚಿತ್ರೀಕರಣ ಹಲವು ದಿನಗಳ ಕಾಲ ನಡೆಯಿತು.
ಆ ಸಿನಿಮಾದಲ್ಲಿ ಮನೆಯಲ್ಲಿಯೇ ಒಂದು ಫೈಟ್ ಸೀನ್ ಇದೆ. ಅದರ ಚಿತ್ರೀಕರಣದ ಸಮಯ ರಾಮ್ ಶೆಟ್ಟಿ ಫೈಟ್ ಮಾಸ್ಟರ್ ಆಗಿದ್ದರು. ಮಹಡಿ ಮೇಲಿಂದ ಕೆಳಗೆ ಬೆಡ್ ಮೇಲೆ ಬೀಳುವ ಒಂದು ಸನ್ನಿವೇಶ ಇತ್ತು. ಆಗ ಅಪ್ಪು ನನ್ನನ್ನು ಕರೆದು, 'ಅವಿನಾಶ್ ಅವರೇ ದಯವಿಟ್ಟು ನೀವು ಹಾಗೆಲ್ಲ ಜಂಪ್ ಮಾಡೋಕೆ ಹೋಗ್ಬೇಡಿ. ರಿಸ್ಕ್ ತಗೋಬೇಡಿ. ಆಗಲ್ಲ ಅಂತ ಹೇಳಿ' ಅಂದಿದ್ರು. ನಾನು ಹಾಗೆಯೇ ಹೇಳಿದ್ದೆ. ನಂತರ ಆ ದೃಶ್ಯವನ್ನು ಕಿಶೋರ್ ಮಾಡಿದ್ರು. ಅಪ್ಪುವಿಗೆ ಹಿರಿಯ ಕಲಾವಿದರ ಬಗ್ಗೆ ಇದ್ದ ಗೌರವ, ಕಾಳಜಿ ಹಾಗಿತ್ತು' ಎಂದರು.
ಅಪ್ಪು ಸಮಯ ಪಾಲನೆ: ಅಪ್ಪುವಿನಲ್ಲಿ ನನಗೆ ನಹಳ ಇಷ್ಟವಾಗುತ್ತಿದ್ದ ಗುಣ ಎಂದರೆ ಸಮಯಪಾಲನೆ. ಸರಿಯಾದ ಸಮಯಕ್ಕೆ ಶೂಟಿಂಗ್‌ಗೆ ಬಂದು ಬಿಡುತ್ತಿದ್ದರು. ಎಷ್ಟೋ ಸಲ ನನಗಿಂತ ಮೊದಲೇ ಬಂದಿರುತ್ತಿದ್ದರು. ನಮಗೇ ನಾಚಿಕೆಯಾಗಿತ್ತು ಎಷ್ಟೋ ಬಾರಿ. ಆ ಡೆಡಿಕೇಷನ್ ಇದೆಯಲ್ಲ, ಅದ್ಭುತ ಅದು.
ಆಕಾಶ್ ಸಿನಿಮಾದಲ್ಲಿ ಬಹಳ ಕ್ಯಾಶುವಲ್ ಆಗಿ ನಟಿಸಿದ್ದರು. ಆ ಸಿನಿಮಾ ಹಿಟ್ ಆಗಲು ಮುಖ್ಯ ಕಾರಣ ಅಪ್ಪು ಅಭಿನಯವೇ ಅನಿಸುತ್ತದೆ. ಅಪ್ಪು ಇಂಟಲಿಜೆಂಟ್ ಹೀರೋ. ಎಲ್ಲ ಪಾತ್ರವನ್ನೂ ಸಹಜವಾಗಿ ವ್ಯಕ್ತಪಡಿಸುತ್ತಿದ್ದರು. ಹಾಗಾಗಿಯೇ ಆಕಾಶ್ ಒಂದು ಸಕ್ಸಸ್‌ಫುಲ್ ಸಿನಿಮಾ ಆಯ್ತು ಎಂದ ಅವರು ಈಗ ‘ಆಕಾಶ್’ ಸಿನಿಮಾ ವೂಟ್ ಸೆಲೆಕ್ಟ್‌ನಲ್ಲಿ ವೀಕ್ಷಣೆಗೆ ಲಭ್ಯವಿರುವ ಕುರಿತು ಸಂತಸ ವ್ಯಕ್ತಪಡಿಸಿದರು.
ಎಲ್ಲರ ಕೈಗೆಟುಕುವ ತಾರೆ: ನೂರಾರು ಸಿನಿಮಾಗಳಲ್ಲಿ ನಟಿಸಿರುವ ಗಿರೀಶ್ ಕಾಸರವಳ್ಳಿ ನಿರ್ದೇಶನದ ಕನಸೆಂಬ ಕುದುರೆಯನೇರಿ ಸಿನಿಮಾ ಮೂಲಕ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದ ವೈಜನಾಥ್ ಬೀರಾದಾರ್ ಮಾತನಾಡಿ ಅಪ್ಪು ಸರಳತೆಯ ವ್ಯಕ್ತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಭಿ ಸಿನಿಮಾದಲ್ಲಿ ಬೀರಾದಾರ್ ಅಪ್ಪು ಜೊತೆಗೆ ತೆರೆ ಹಂಚಿಕೊಂಡಿದ್ದರು.
'ಅಪ್ಪು ಸಿನಿನಮನ'ದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಅಪ್ಪು ಅವರ ಜೊತೆ ನಾನು ಮಾಡಿದ ಮೊದಲ ಸಿನೆಮಾ ಅಭಿ. ಯಾರನ್ನೂ ಇವನು ಸಣ್ಣವನು ನಾನು ದೊಡ್ಡವನು ಎಂಬ ಭಾವದಲ್ಲಿ ಅವರು ನಡೆಸಿಕೊಳ್ಳುತ್ತಿರಲಿಲ್ಲ. ಒಬ್ಬ ಲೈಟ್‌ಬಾಯ್ ಸಿಗಲಿ, ಊಟ ಕೊಡುವವರು ಸಿಗಲಿ, ಪೋಷಕ ನಟ ಇರಲಿ, ಯಾರಿದ್ದರೂ ಅವರು ತುಂಬ ಪ್ರೀತಿಯಿಂದ ಬಂದು ಅಪ್ಪಿಕೊಂಡು, ನಮಸ್ಕಾರ ಹೇಗಿದ್ದೀರಿ? ಎಂದು ಮಾತಾಡಿಸುತ್ತಿದ್ದರು.
ಕರ್ನಾಟಕ ಜನತೆ ಒಪ್ಪಿದ ಒಬ್ಬ ಕಲಾವಿದ ಎಲ್ಲರ ಜೊತೆಗೆ ಬೆರೆಯುವುದು ಇದೆಯಲ್ಲ, ಅದು ಎಲ್ಲರಲ್ಲಿಯೂ ಬರುವುದಿಲ್ಲ. ನಾನು, ನಮಸ್ಕಾರ ಸರ್ ಎಂದರೆ, ಯಜಮಾನರೇ ನೀವು ನನ್ನನ್ನು ಸರ್ ಅನ್ನಬೇಡಿ, ಪುನೀತ್ ಅನ್ನಿ. ನಿಮ್ಮ ಎಷ್ಟೋ ಪಾತ್ರಗಳನ್ನು ನಾನು ನೋಡಿ ಎಂಜಾಯ್ ಮಾಡಿದ್ದೀನಿ ಎನ್ನುತ್ತಿದ್ದರು.
ಅಪ್ಪು ಈಗ ಇಲ್ಲ, ಆದರೆ ಇದ್ದಾರೆ: ಇಂದು ಇಡೀ ಕರ್ನಾಟಕ ಜನತೆಯೇ ಅವರನ್ನು ಮೆಚ್ಚಿ ನೆನಪಿಸಿಕೊಳ್ಳುತ್ತಿದೆ. ಅವರು ಇಲ್ಲ ಎನ್ನುವ ಮಾತೇ ಇಲ್ಲ. ಅವರು ಮಾಡಿದ ಸಮಾಜಮುಖಿ ಕೆಲಸಗಳು ಸಾಕಷ್ಟು. ಸಂಪತ್ತು ಎಲ್ಲರ ಬಳಿ ಇರುತ್ತದೆ. ಅದನ್ನು ನಾವು ಹೇಗೆ ಬಳಸಬೇಕು ಎಂಬ ವಿವೇಕ ಬಹಳ ದೊಡ್ಡದು. ಅದು ಅಪ್ಪು ಅವರಿಗಿತ್ತು. ಸತ್ತು ಬದುಕಿದವರು, ಬದುಕಿ ಸತ್ತವರು ಈ ಎರಡು ರೀತಿಗಳಲ್ಲಿ ಅಪ್ಪು ಮೊದಲನೇ ರೀತಿಯವರು. ಅಪ್ಪು ಈಗ ಇಲ್ಲ, ಆದರೆ ಇದ್ದಾರೆ ಎಂದು ಭಾವುಕರಾಗಿ ನುಡಿದರು.
ಅಪ್ಪು ಎಂದರೆ ಅಪ್ಪುಗೆ: ಅಪ್ಪು ಅವರು ನಾಯಕನಾಗಿ ತೆರೆಯ ಮೇಲೆ ಪರಿಚಯಗೊಳ್ಳುವ ಮೊದಲಿನಿಂದಲೂ ಅವರ ಜೊತೆಗೆ ಒಡನಾಟ ಇರಿಸಿಕೊಂಡಿದ್ದವರು ಹಿರಿಯ ನಟ ಸುಂದರರಾಜ್. ಅಪ್ಪು ಅಂದಾಕ್ಷಣ ಅವರಿಗೆ ಒಂದು ಬೆಚ್ಚನೆಯ ಅಪ್ಪುಗೆ ನೆನಪಾಗುತ್ತದೆಯಂತೆ. ಆ ಅಪ್ಪುಗೆ ಅವರಿಗೆ ಸಿಕ್ಕಿದ್ದು ಅಪ್ಪು ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿಯೇ.
ಅಪ್ಪು ಅಂದಾಕ್ಷಣ ಅವರ ಜೊತೆಗೆ ಕಳೆದ ಅನೇಕ ಸಂದರ್ಭಗಳು ನೆನಪಾಗುತ್ತವೆ. ಅಪ್ಪು ಎಂದರೆ ಅಪ್ಪುಗೆ. ನಾನು ಅಪ್ಪು ಜೊತೆಗೆ ಕೆಲಸ ಮಾಡಿದ ಮೊದಲ ಸಿನಿಮಾ ಅಪ್ಪು. ಅಪ್ಪು ಹದಿಹರೆಯದ ಹುಡುನಾಗಿದ್ದಾಗಲೇ ನಾನು ಅವರ ಮನೆಗೆ ಹೋಗುತ್ತಿದ್ದೆ. ಆಗ ಅವರು ಯಂಗ್ ಲುಕ್‌ನಲ್ಲಿ ಮನೆ ತುಂಬ ಓಡಾಡಿಕೊಂಡು ಇರುತ್ತಿದ್ದರು. ಅವರನ್ನು ನೋಡಿ ಖುಷಿಯಾಗುತ್ತಿತ್ತು.
ಇದನ್ನೂ ಓದಿ: ಮಕ್ಕಳಿಗಾಗಿ ಗಂಧದ ಗುಡಿ ಟಿಕೆಟ್ ಬೆಲೆ ಇಳಿಕೆ: ಚಿತ್ರದ ಬಗ್ಗೆ ಮಾತನಾಡಿ, ಬಹುಮಾನ ಗೆಲ್ಲಿ!
ಅಪ್ಪು ಸಿನಿಮಾ ಶೂಟಿಂಗ್‌ಗೆ ಹೋಗಿದ್ದಾಗ ಸೆಟ್‌ನಲ್ಲಿ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಬಂದು ನನ್ನ ಕಣ್ಣುಮುಚ್ಚಿದರು. ಯಾರು ಎಂದು ತಿರುಗಿ ನೋಡಿದರೆ ಅಪ್ಪು! ‘ಮಾಮ, ನಾನು’ ಎಂದು ಮಾತಾಡಿಸಿದರು. ನನಗೆ ದಿಗ್ಭ್ರಮೆಯಾಯಿತು. ಅಪ್ಪು ಬಂದು ನನ್ನ ಅಪ್ಪಿಕೊಂಡು ನನ್ನ ಬಳಿ ಪ್ರೀತಿಯಿಂದ ಮಾತಾಡಿಸಿದ್ದನ್ನು ನಾನು ಇಂದಿಗೂ ಮರೆತಿಲ್ಲ, ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ. ಹಾಗಾಗಿಯೇ ಅಪ್ಪು ಎಂದರೆ ಇಂದಿಗೂ ನನಗೆ ಆ ಬೆಚ್ಚನೆಯ ಅಪ್ಪುಗೆ ಎಂದು ನೆನಪಿಸಿಕೊಂಡರು.